ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ವರ್ಷವೂ ದೆಹಲಿಯ ಶಾಲಾ ಬಾಲಕಿಯರಿಂದ ರಾಖಿಯನ್ನು ಕಟ್ಟಿಸಿಕೊಂಡು ರಕ್ಷಾ ಬಂಧನವನ್ನು ಆಚರಿಸಿದರು. ಬಂದಿದ್ದ ಪುಟ್ಟ ಮಕ್ಕಳೊಂದಿಗೆ ಆಪ್ತವಾಗಿ ಸಂವಾದ ಮಾಡುತ್ತಾ ಮೋದಿ ತಮ್ಮ ಕೈ ರಕ್ಷೆಯನ್ನು ಕಟ್ಟಿಸಿಕೊಂಡಿದ್ದಾರೆ. ಮೋದಿಯ ಭಾವಚಿತ್ರ ಇರುವ ರಾಕಿಯಿಂದ ಹಿಡಿದು ನಾನಾ ವಿಧವಾದ ರಾಕಿಗಳನ್ನು ಪುಟಾಣಿಗಳು ಕಟ್ಟಿ ಸಂಭ್ರಮಿಸಿದರು.
ಇಂದು ಪ್ರಧಾನಿ ಮೋದಿ ರಕ್ಷಾ ಬಂಧನದ ಶುಭಾಶಯಗಳನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಿಳಿಸಿದ್ದರು. “ನನ್ನ ಕುಟುಂಬದ ಎಲ್ಲ ಸದಸ್ಯರಿಗೆ ರಕ್ಷಾಬಂಧನದ ಶುಭಾಶಯಗಳು. ಅಣ್ಣ-ತಂಗಿಯರ ನಡುವಿನ ಅವಿನಾಭಾವ ನಂಬಿಕೆ ಮತ್ತು ಅಪಾರ ಪ್ರೀತಿಗೆ ಸಮರ್ಪಿತವಾದ ರಕ್ಷಾಬಂಧನದ ಈ ಮಂಗಳಕರ ಹಬ್ಬವು ನಮ್ಮ ಸಂಸ್ಕೃತಿಯ ಪವಿತ್ರ ಪ್ರತಿಬಿಂಬವಾಗಿದೆ. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ವಾತ್ಸಲ್ಯ, ಸಾಮರಸ್ಯ ಭಾವನೆಯನ್ನು ಬಲಪಡಿಸುತ್ತದೆ ಎಂದು ನಾನು ಬಯಸುತ್ತೇನೆ”ಎಂದು ಪಿಎಂ ಬರೆದುಕೊಂಡಿದ್ದಾರೆ.
ನಿನ್ನೆ ಎಲ್‌ಪಿಜಿ ಬೆಲೆ ಇಳಿಕೆ ಮಾಡಿದ ಮೋದಿ, ರಕ್ಷಾ ಬಂಧನ ಕುಟುಂಬದಲ್ಲಿ ಸಂತೋಷ ಹೆಚ್ಚಿಸುವ ಹಬ್ಬವಾಗಿದೆ. ಎಲ್‌ಪಿಜಿ ಬೆಲೆ ಇಳಿಕೆಯು ನನ್ನ ಕುಟುಂಬದ ಸಹೋದರಿಯರಿಗೆ ಹೆಚ್ಚಿನ ಆರಾಮದಾಯಕ ಮತ್ತು ಜೀವನವನ್ನು ಸುಲಭಗೊಳಿಸಲಿದೆ. ನನ್ನ ಪ್ರತಿಯೊಬ್ಬ ಸಹೋದರಿಯು ಸಂತೋಷದಿಂದ ಮತ್ತು ಆರೋಗ್ಯವಾಗಿರಲಿ” ಎಂದು ಹೇಳಿದ್ದರು.