Wednesday, April 9, 2025
Google search engine

Homeರಾಜ್ಯವೃಕ್ಷ ಮಾತೆ ತುಳಸಿ ಗೌಡ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ವೃಕ್ಷ ಮಾತೆ ತುಳಸಿ ಗೌಡ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಬೆಂಗಳೂರು: ʼವೃಕ್ಷಮಾತೆʼ ಎಂದೇ ಜನಪ್ರಿಯರಾಗಿದ್ದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಸೋಮವಾರ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ವೃಕ್ಷಮಾತೆಯ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ತಮ್ಮ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

ʼʼಕರ್ನಾಟಕದ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಅವರ ನಿಧನ ತೀವ್ರ ದುಃಖ ತಂದಿದೆ. ಅವರು ತಮ್ಮ ಇಡೀ ಬದುಕನ್ನು ಪ್ರಕೃತಿ ಪೋಷಣೆಗಾಗಿ ಮುಡಿಪಾಗಿಟ್ಟು, ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ನಮ್ಮ ಪರಿಸರವನ್ನು ಸಂರಕ್ಷಿಸಿದ್ದಾರೆ. ಪರಿಸರ ರಕ್ಷಣೆಗೆ ಸದಾ ಮಾರ್ಗದರ್ಶನ ನೀಡುವ ಬೆಳಕಾಗಿ ಅವರು ಉಳಿಯುತ್ತಾರೆ. ಅವರ ಕೆಲಸಗಳು ನಮ್ಮ ಭೂಗ್ರಹವನ್ನು ರಕ್ಷಿಸಲು ತಲೆಮಾರುಗಳಿಗೆ ಪ್ರೇರಣೆ ನೀಡುತ್ತಿರುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿʼʼ ಎಂದು ಮೋದಿ ಬರೆದಿದ್ದಾರೆ.

ವರ್ಷಕ್ಕೆ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ತುಳಸಿ ಗೌಡ ವೃಕ್ಷ ಮಾತೇ ಎಂದು ಹೆಸರಾಗಿದ್ದರು. ಅರಣ್ಯ ಇಲಾಖೆಯ ಸಸ್ಯ ನರ್ಸರಿಯಲ್ಲಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದ ತುಳಸಿ ಗೌಡ, ಬಾಲ್ಯದಲ್ಲಿಯೇ ಆಗಾಗ್ಗೆ ನರ್ಸರಿಗಳಿಗೆ ಭೇಟಿ ನೀಡಿ, ಸಸಿಗಳ ಬೆಳವಣಿಗೆ ಕುರಿತು ಆಳವಾದ ಜ್ಞಾನ ಬೆಳೆಸಿಕೊಂಡಿದ್ದರು. ಅಂಕೋಲಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಅವುಗಳಲ್ಲಿ ಬಹುತೇಕ ಸಸಿಗಳು ಕೆಲವೇ ವರ್ಷಗಳಲ್ಲಿ ಎತ್ತರಕ್ಕೆ ಬೆಳೆದಿದ್ದವು.

ಹಾಲಕ್ಕಿ ಸಮುದಾಯಕ್ಕೆ ಸೇರಿದ ಅವರಿಗೆ ಪರಿಸರದ ಮೇಲೆ ವಿಶೇಷವಾದ ಕಾಳಜಿ ಇತ್ತು. ತೀರಾ ಬಡತನವಿದ್ದರೂ ಹಸಿರು ಕ್ರಾಂತಿ ಮಾಡಿ ಇಡೀ ದೇಶದ ಗಮನ ಸೆಳೆದಿದ್ದರು. ತುಳಸಿಗೌಡ ಅವರ ಪರಿಸರ ಪ್ರೇಮವನ್ನ ಮೆಚ್ಚಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. 2020ರಲ್ಲಿ ಅಂದಿನ ರಾಷ್ಟ್ರಪತಿ ರಮಾನಾಥ ಕೋವಿಂದ ಅವರಿಂದ ತುಳಸಿ ಗೌಡ ಅವರು ಪದ್ಮಶ್ರೀ ಪ್ರಶಸ್ತಿ ಸ್ವಿಕರಿಸಿದ್ದರು.

RELATED ARTICLES
- Advertisment -
Google search engine

Most Popular