ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ ಅವರು ಧ್ಯಾನದ ಅಂಗವಾಗಿ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಸ್ಮಾರಕದಲ್ಲಿ ಸೂರ್ಯೋದಯದ ಸಮಯದಲ್ಲಿ ಸೂರ್ಯ ಅರ್ಘ್ಯ ನೀಡಿದರು.
ಸೂರ್ಯ ಅರ್ಘ್ಯಎಂಬ ಧಾರ್ಮಿಕ ಆಚರಣೆಯು ಸರ್ವಶಕ್ತನಿಗೆ ನಮಸ್ಕಾರವನ್ನು ಒಳಗೊಂಡಿದ್ದು,ಪ್ರಧಾನಿ ಅದರ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದರು. ‘ಸೂರ್ಯೋದಯ, ಸೂರ್ಯ ಅರ್ಘ್ಯ, ಆಧ್ಯಾತ್ಮಿಕತೆ’ ಎಂಬ ಕಿರು ವೀಡಿಯೊವನ್ನು ಬಿಜೆಪಿ ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದೆ. ಸಣ್ಣ ಪಾತ್ರೆಯಿಂದ ಸ್ವಲ್ಪ ನೀರನ್ನು ಸಮುದ್ರಕ್ಕೆ ನೈವೇದ್ಯ (ಅರ್ಘ್ಯ) ಅರ್ಪಿಸಿ, ಪ್ರಾರ್ಥಿಸಿದರು. ಪ್ರಾರ್ಥನೆಗೆ ಜಪ ಮಾಲೆಯನ್ನು ಬಳಸಿದರು.
ಕೇಸರಿ ವಸ್ತ್ರ ಅಂಗಿ, ಶಾಲು ಮತ್ತು ಧೋತಿ ಧರಿಸಿ ಧ್ಯಾನ ಮಂಟಪದಲ್ಲಿ ಕುಳಿತ ಪ್ರಧಾನಿ ಅವರ ಚಿತ್ರಗಳನ್ನು ಬಿಜೆಪಿ ಪೋಸ್ಟ್ ಮಾಡಿದೆ. ಅವರ ಮುಂದೆ ಅಗರಬತ್ತಿ ನಿಧಾನವಾಗಿ ಉರಿಯುತ್ತಿದೆ. ಅವರು ಜಪಮಾಲೆಯನ್ನು ಕೈಯಲ್ಲಿ ಹಿಡಿದು ಪ್ರದಕ್ಷಿಣೆ ಮಾಡಿದರು.
ಕನ್ಯಾಕುಮಾರಿ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದ್ದು, ಸ್ಮಾರಕವು ತೀರದ ಸಮೀಪವಿರುವ ಸಣ್ಣ ದ್ವೀಪದಲ್ಲಿದೆ. ಮೇ ೩೦ ರ ಸಂಜೆ ಧ್ಯಾನ ಆರಂಭಿಸಿರುವ ಅವರು, ಜೂನ್ ೧ ರ ಸಂಜೆ ಪೂರ್ಣಗೊಳಿಸಲಿದ್ದಾರೆ. ಅವರು ಕನ್ಯಾಕುಮಾರಿಯಲ್ಲಿರುವ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.