ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ 7 ರಂದು ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಮೇ 6 ಮತ್ತು 7 ರಂದು ಅಭ್ಯರ್ಥಿಗಳು ಮತ್ತು ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಯು ದಿನಪತ್ರಿಕೆಗಳಲ್ಲಿ ಯಾವುದೇ ರೀತಿಯ ಜಾಹೀರಾತು ಪ್ರಕಟಿಸಬೇಕಾದರೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ) ವತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿಯಿಂದ (ಎಂಸಿಎಂಸಿ) ವಿವಿಧ ಮಾಧ್ಯಮಗಳಲ್ಲಿ ದಿನನಿತ್ಯ ಪ್ರಸಾರವಾಗುವ ರಾಜಕೀಯ ಜಾಹೀರಾತುಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಂಸಿಎಂಸಿ ಸಮಿತಿಯ ಅನುಮತಿಯಿಲ್ಲದೆ ಚುನಾವಣಾ ರಾಜಕೀಯ ಜಾಹೀರಾತು ಪ್ರಕಟಿಸುವಂತಿಲ್ಲ, ಎಂಸಿಎಂಸಿ ಸಮಿತಿಯ ಪೂರ್ವಾನುಮತಿ ಪಡೆದು ರಾಜಕೀಯ ಜಾಹೀರಾತು ಪ್ರಕಟಿಸಬೇಕು.
ವಿದ್ಯುನ್ಮಾನ ಮಾಧ್ಯಮ(ಎಲೆಕ್ಟ್ರಾನಿಕ್)ಗಳಾದ ಟಿ.ವಿ, ರೇಡಿಯೋ, ಮೊಬೈಲ್ ಸಂದೇಶ, ಧ್ವನಿ ಮುದ್ರಿತ ಸಂದೇಶಗಳು, ಬಲ್ಕ್ ಎಸ್‍ಎಂಎಸ್ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಎಕ್ಸ್, ಇನ್‍ಸ್ಟಾಗ್ರಾಂಗಳಲ್ಲಿ ಜಾಹೀರಾತು ಮೂಲಕ ಪ್ರಚಾರ ಕೈಗೊಳ್ಳುವವರು ಎಂಸಿಎಂಸಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಮತದಾನದ ಪೂರ್ವ ದಿನವಾದ ಮೇ 06 ಮತ್ತು ಮತದಾನ ದಿನವಾದ ಮೇ 07 ರಂದು ಚುನಾವಣಾ ರಾಜಕೀಯ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಅಭ್ಯರ್ಥಿಗಳು ಅಥವಾ ವ್ಯಕ್ತಿಗಳು ಚುನಾವಣಾ ರಾಜಕೀಯ ಜಾಹೀರಾತು ಪ್ರಸಾರ ಹಾಗೂ ಪ್ರಕಟಣೆಗೆ ನಿಗದಿತ ನಮೂನೆಯಲ್ಲಿ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು ಮೇ 06 ಮತ್ತು 07 ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಮೇ 04 ರೊಳಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ)ಗೆ ಅರ್ಜಿ ಸಲ್ಲಿಸಬೇಕು.
ಪೂರ್ವಾನುಮತಿಗೆ ಅರ್ಜಿ ಲಭ್ಯ: ಮೇ 06 ಮತ್ತು 07 ರಂದು ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸುವ ಸಲುವಾಗಿ ಅನುಮತಿ ಪಡೆಯಲು ಅಗತ್ಯವಿರುವ ನಿಗದಿತ ನಮೂನೆಯ ಅರ್ಜಿ ನಮೂನೆಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕಚೇರಿಯಿಂದ ಪಡೆಯಬಹುದು.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾ ಮಟ್ಟದ ಎಂಸಿಎಂಸಿ ವತಿಯಿಂದ ನಿಗದಿತ ನಮೂನೆಯಲ್ಲಿ ಪೂರ್ವಾನುಮತಿ ಪಡೆಯದ ಜಾಹೀರಾತುಗಳನ್ನು ಸ್ಥಳೀಯ, ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ದಿನಪತ್ರಿಕೆಗಳು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.