ಧಾರವಾಡ : ಸಮಾಜ ಇಷ್ಟು ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿಯಿಂದ ಇರಲು ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ. ಅವರ ತ್ಯಾಗ, ಬಲಿದಾನ ಮತ್ತು ಸೇವೆಯನ್ನು ಸಮಾಜ ಸ್ಮರಿಸಿ, ಗೌರವಿಸಬೇಕೆಂದು ಅರಣ್ಯ ಇಲಾಖೆ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ .ಡಿ. ಅವರು ಹೇಳಿದರು.
ಅವರು ಇಂದು (ಅ.೨೧) ಬೆಳಿಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಡಿಎಆರ್ ಮೈದಾನ ಆವರಣದ ಪೊಲೀಸ್ ಹುತಾತ್ಮ ಸ್ಮಾರಕದ ಹತ್ತಿರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾಜ ಮತ್ತು ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಗಳ ಕೊಡುಗೆ ಅಪಾರವಾಗಿದೆ. ಅದನ್ನು ಧನ್ಯತೆಯಿಂದ ನೆನೆಯಬೇಕು. ಯುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯದ ಮೇಲಿದ್ದಾಗ ಪ್ರಾಣ ತ್ಯಾಗ ಮಾಡುತ್ತಾರೆ ಎಂದು ಯತೀಶಕುಮಾರ ತಿಳಿಸಿದರು.
ಮಾನಸಿಕ ಸದೃಡತೆಯು ವೃತ್ತಿಯ ದಕ್ಷತೆ ಹೆಚ್ಚಿಸುತ್ತದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒತ್ತು ನೀಡಬೇಕು. ಸಮತೋಲನ ಕಾಯಬೇಕು. ಅಂದಾಗ ಮಾತ್ರ ನಾವು ಉತ್ತಮ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ಯತೀಶಕುಮಾರ ಹೇಳಿದರು. ವಿಶೇಷ ಆಹ್ವಾನಿತರಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ದೇಶ ಮತ್ತು ಸಮುದಾಯದ ರಕ್ಷಣೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಕಾರಣ. ಪೊಲೀಸ್ ಇಲಾಖೆಗೆ ನಾವು ಋಣಿ ಆಗಿರಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು. ಭದ್ರತಾ ಸಿಬ್ಬಂದಿಗಳನ್ನು ಗೌರವಿಸುವ ಗುಣ ಎಲ್ಲರಲ್ಲೂ ಬೆಳೆಯಬೇಕು. ಈ ನಿಟ್ಟಿನಲ್ಲಿ ಬೆಳೆಯುವ ಮಕ್ಕಳಲ್ಲಿಯೂ ಪೊಲೀಸ್, ಭದ್ರತಾ ಸಿಬ್ಬಂದಿಗಳ ಬಗ್ಗೆ ಗೌರವಭಾವನೆ, ವರ್ತನೆ ಬೆಳೆಸಬೇಕೆಂದು ಅವರು ಹೇಳಿದರು.
ಮಾನವೀಯತೆ ಮೆರೆದ ಗರಗ ಠಾಣೆ ಪೊಲೀಸ್ ಸಿಬ್ಬಂದಿ: ತಮ್ಮ ಸಹೋದ್ಯೋಗಿ ಮೃತ ಹುಚ್ಚಪ್ಪ ಮಲ್ಲೆನ್ನವರ ಕುಟುಂಬ ಬಡತನ ಹಿನ್ನಲೆಯದ್ದು, ಮಗನ ವೇತನದಲ್ಲಿ ಮನೆತನ, ಮಕ್ಕಳ ಭವಿಷ್ಯ ರೂಪಿಸುತ್ತಿದ್ದ ನೀಲವ್ವ ಮತ್ತು ಹಣಮಂತಪ್ಪ ದಂಪತಿಗೆ ಮಗನ ಸಾವು ಬರಸಿಡಿಲು ಬಡಿದಂತೆ ಆಗಿದೆ. ಅವರ ದುಃಖ, ತಾಪ ಇನ್ನು ತಣ್ಣಗಾಗಿಲ್ಲ. ಇಂದು ಪೊಲೀಸ್ ಹುತಾತ್ಮ ದಿನಕ್ಕೆ ಆಗಮಿಸಿದ್ದ ಅವರನ್ನು ಎಸ್ಪಿ ಮೊದಲಾಗಿ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಮಾದಾನ ಹೇಳಿ ಸಂತೈಸಿದರು.
