ಕೆ.ಆರ್.ನಗರ : ದಶಕಗಳ ಕಾಲ ಅಭಿವೃದ್ಧಿಯಿಂದ ವಂಚಿತವಾದ ಗ್ರಾಮಗಳ ಅಭಿವೃದ್ಧಿ ಗೆ ಆದ್ಯತೆ ಮೇರೆಗೆ ಅನುದಾನ ನೀಡಿ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವುದಾಗಿ ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಮಾರ್ಚಹಳ್ಳಿ ಗ್ರಾಮದಲ್ಲಿ 75 ಲಕ್ಷ ರೂಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಗ್ರಾಮಕ್ಕೆ ಮತಗಟ್ಟೆ ಮತ್ತು ಪಡಿತರ ವಿತರಣಾ ಕೇಂದ್ರ ಆರಂಭಿಸಲು ಬೇಡಿಕೆ ಸಲ್ಲಿಸಿದ್ದು ಈ ವಿಚಾರವನ್ನು ಗಂಬೀರವಾಗಿ ಪರಿಗಣಿಸಿ ಈ ಸಂಬಂಧ ಸ್ಥಳ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರದಲ್ಲಿಯೇ ಗ್ರಾಮಸ್ಥರ ಮನವಿಗೆ ಸ್ಪಂದಿಸುವ ಭರವಸೆ ನೀಡಿದರು.
ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಹೈನುಗಾರಿಕೆ ಮಾಡುವ ರೈತರಿಗೆ ಅಗತ್ಯ ಸಾಲ ಸೌಲಭ್ಯ ಕೊಡಿಸುವುದಾಗಿ ಘೋಷಿಸಿದ ಶಾಸಕರು ಎಸ್ ಸಿಇಪಿ ಮತ್ತು ಟಿಎಸ್ ಪಿ ಯೋಜನೆಯ ಅನುದಾನಡಿ ಗ್ರಾಮದ ಚರಂಡಿ ನಿರ್ಮಾಣಕ್ಕೆ ಹಣ ನೀಡುವುದಾಗಿ ಪ್ರಕಟಿಸಿದರು.
ಜನತೆ ನನಗೆ ನೀಡಿದ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಅವರ ಆಶಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವುದಾಗಿ ನುಡಿದ ಅವರು ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳ್ಳಿಸುವಾಗ ಸಾರ್ವಜನಿಕರು ಚುನಾಯಿತ ಜನಪ್ರತಿನಿಧಿಗಳೊಂದಿಗೆ ಕೈ ಜೋಡಿಸಬೇಕೆಂದರು.
ಗುತ್ತಿಗೆದಾರರು ಮತ್ತು ಕಾಮಗಾರಿಯನ್ನು ಗುತ್ತಿಗೆ ಪಡೆಯುವ ಏಜೆನ್ಸಿ ಅವರು ನಿಗಧಿತ ಅವಧಿಯೊಳಗೆ ಗುಣಮಟ್ಟದಲ್ಲಿ ಕೆಲಸಮಾಡಬೇಕೆಂದು ತಾಕೀತು ಮಾಡಿದ ಡಿ.ರವಿಶಂಕರ್ ಕೆಲಸ ನಡೆಯುವಾಗ ಗ್ರಾಮಸ್ಥರು ಉಸ್ತುವಾರಿ ವಹಿಸಬೇಕು ಎಂದು ಸೂಚಿಸಿದರು.
ಮಾರ್ಚಹಳ್ಳಿ ಗ್ರಾಮದ ಗ್ರಾಮ ಪರಿಮಿತಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ 50 ಲಕ್ಷ, ಗ್ರಾಮದ ಕಾಳಿಕಾಂಭ ದೇವಸ್ಥಾನ, ಸಿದ್ದರಾಮೇಶ್ವರ ದೇವಸ್ಥಾನ, ಮಾರಮ್ಮ ದೇವಸ್ಥಾನ ಮತ್ತು ಬಸವೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ತಲಾ 5 ಲಕ್ಷ ರೂ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಎಇಇ ಗೈರು :
ಮಾರ್ಚಹಳ್ಳಿ ಗ್ರಾಮದಲ್ಲಿ ನಡೆದ ಕೆಆರ್ ಐಡಿಎಲ್ ಅನುದಾನದಡಿ ಶಾಸಕ ಡಿ.ರವಿಶಂಕರ್ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮಕ್ಕೆ ಇಲಾಖೆಯ ಎಇಇ ಶೋಭಾ ಗೈರು ಹಾಜರಾಗಿ ತಮ್ಮ ದಾಷ್ಟ್ಯತೆ ಮೆರೆದರು.
ಜಿ.ಪಂ.ಮಾಜಿ ಸದಸ್ಯ ಮಾರ್ಚಹಳ್ಳಿಶಿವರಾಮು, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಪಾರ್ವತಮ್ಮಲೋಕೇಶ್, ಬ.ಮಾ.ಗಿರೀಶ್, ಮುಖಂಡರಾದ ವಿಜಯಕುಮಾರ್, ರಾಮಚಂದ್ರ, ನಾಗೇಗೌಡ, ಸುನೀಲ್, ರಾಜಶೇಖರ್, ಮಹದೇವ್, ರಾಚೇಗೌಡ, ಸಿದ್ದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹೇವ್, ವಕ್ತಾರ ಸೈಯದ್ ಜಾಬೀರ್, ಯಜಮಾನ್ ಮಹದೇವ್ ಸೇರಿದಂತೆ ಇನ್ನಿತರರು ಹಾಜರಿದ್ದರು.



