ಬೆಂಗಳೂರು: ರಾಜ್ಯದ ಬಂದೀಖಾನೆಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನು ಇರಿಸಲಾಗಿದ್ದು, ಸದ್ಯ ಹೆಚ್ಚುವರಿ ಬ್ಯಾರಕು ನಿರ್ಮಾಣಕ್ಕೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಜೈಲುಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಕಾರಾಗೃಹದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನ ಬಂಧನದಲ್ಲಿಟ್ಟುರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವವರು, ರಾಜ್ಯದಲ್ಲಿ 54 ಕಾರಾಗೃಹಗಳಿದ್ದು, ಅವುಗಳಲ್ಲಿ 9 ಕೇಂದ್ರ, 21 ಜಿಲ್ಲಾ ಕಾರಾಗೃಹ, 29 ತಾಲೂಕು ಕಾರಾಗೃಹಗಳಿವೆ. ಪ್ರಸ್ತುತ 14,237 ಬಂಧಿಗಳಿಗೆ ಅವಕಾಶವಿದೆಯಾದರೂ, ಈಗ 16053 ಮಂದಿ ಕೈದಿಗಳು ಇದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರಾಗೃಹ ನಿರ್ಮಿಸುವ ಕೆಲಸ ಮಾಡುತ್ತೇವೆ. 6 ನೂತನ ಕಾರಾಗೃಹ ಮತ್ತು 8 ಕಾರಾಗೃಹಗಳಲ್ಲಿ ಹೆಚ್ಚುವರಿ ಬ್ಯಾರಕು ನಿರ್ಮಿಸಲಾಗುತ್ತಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಅವರ ಮನ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅವರ ಜೀವನ ನಿರ್ವಹಿಸಲು ತರಬೇತಿಯನ್ನು ನೀಡುತ್ತಿದ್ದೇವೆ. 28 ಕಾರಾಗೃಹಗಳಲ್ಲಿ ಅಧಿಕೃತ ಸ್ಥಳಾವಕಾಶಕ್ಕಿಂತ ಹೆಚ್ಚುವರಿ ಬಂಧಿಗಳು ದಾಖಲಾಗಿದ್ದಾರೆ. ಬಹಳ ಮಂದಿ ವಿದ್ಯಾವಂತರಿದ್ದಾರೆ, ಅವರಿಗೂ ಕಂಪ್ಯೂಟರ್ ತರಬೇತಿ ಸೇರಿದಂತೆ ಹಲವು ತರಬೇತಿ ನೀಡುತ್ತಿದ್ದೇವೆ ಎಂದು ವಿವರಣೆ ನೀಡಿದರು.
ಡ್ರಗ್ಸ್, ವೇಶ್ಯಾವಾಟಿಕೆ ದಂಧೆಯಲ್ಲಿ ವಿದೇಶಿ ಪ್ರಜೆಗಳು ತೊಡಗಿಸಿಕೊಳ್ಳುತ್ತಿರುವ ಮಾಹಿತಿ ಇದ್ದು, ವೀಸಾ ಅವಧಿ ಮುಗಿದ ವಿದೇಶಿ ಪ್ರಜೆಗಳ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 27,294 ಮಂದಿ ರೌಡಿಶೀಟರ್ ಗಳು ಇದ್ದಾರೆ. ರೌಡಿ ರೌಡಿನೇ ಅವನಿಗೆ ಜಾತಿ, ಧರ್ಮ ನೋಡೋದಿಲ್ಲ. ಜಾತಿವಾರು ಅಂಕಿ-ಅಂಶ ಕೊಡಲು ಬರುವುದಿಲ್ಲ. ರೌಡಿಗಳ ವಿವರ ಕೊಡೋಕೆ ಬರೊಲ್ಲ, ಅದು ಕಾನ್ಫಿಡೆನ್ಷಿಯಲ್ ಎಂದು ತಿಳಿಸಿದರು.