ಮೈಸೂರು: ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮೂಕಾಂಬಿಕ ಸಮೃದ್ಧಿ ಬಡಾವಣೆಯ ನಿವಾಸಿಗಳಾದ ಪುನೀತ್ ಜಿ ಕೂಡ್ಲೂರು ಹಾಗೂ ಪೂಜಾ ಎನ್ ದಂಪತಿಗಳ ಪುತ್ರ ಪೃಥು. ಪಿ. ಅದ್ವೈತ್ ರವರು ಪೂರ್ಣ ಚೇತನ ಪಬ್ಲಿಕ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದು, ಶಾಲೆಯಲ್ಲಿ ನಡೆದ ವಿಶ್ವ ದಾಖಲೆ ಮಹೋತ್ಸವ 2024ರಲ್ಲಿ ಭಾಗವಹಿಸಿ 30 ನಿಮಿಷದಲ್ಲಿ 150 ಶ್ಲೋಕಗಳನ್ನು ಪಠಿಸಿ, ಮೂರು ವಿಶ್ವ ದಾಖಲೆಗಳನ್ನು ಏಕಕಾಲದಲ್ಲಿ ನಿರ್ಮಿಸಿದ್ದಾನೆ. ಈ ಸಾಧನೆಯನ್ನು ಗುರುತಿಸಿ ಅಭಿನಂದಿಸಲು ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯು ನಿರ್ಧರಿಸಿ ಬಡಾವಣೆಯಲ್ಲಿ ಪೃಥು. ಪಿ. ಅದ್ವೈತ್ ರವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿ “ಬಾಲ ಸ್ತೋತ್ರ ಕಲಾ ರತ್ನ” ನೀಡಿ ಗೌರವಿಸಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ ರಾಜ್ಯವಲಯ ಉಪಾಧ್ಯಕ್ಷರಾದ ನಂ. ಶ್ರೀಕಂಠಕುಮಾರ್ , ಆದರ್ಶ ಸೇವಾ ಸಂಘದ ಅಧ್ಯಕ್ಷರಾದ ಜಿ.ಆರ್.ನಾಗರಾಜ್ , ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರು ಹಾಗೂ ವಿಜ್ಞಾನಿಗಳಾದ ಗಾಂಧಿದಾಸ್, ಮೂಕಾಂಬಿಕ ಸಮೃದ್ಧಿ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷರಾದ ಕೆ.ಆರ್.ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣಾಚಾರಿ ಭಾರತಮಾತೆಗೆ ಪುಷ್ಫಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಂ. ಶ್ರೀಕಂಠಕುಮಾರ್ ಪೃಥು. ಪಿ. ಅದ್ವೈತ್ ರವರು ಏಳನೇ ವಯಸ್ಸಿನಲ್ಲಿ ವಿಶ್ವದಾಖಲೆ ನಿರ್ಮಿಸಿರುವುದು ಅತ್ಯಂತ ಹೆಮ್ಮೆ ಪಡುವ ವಿಷಯವಾಗಿದೆ. ವಿಶ್ವದಾಖಲೆ ಎಂದರೆ ನಾವು ಇದುವರೆಗೂ ಕೇಳಿದ್ದು ಮತ್ತು ನೋಡಿದ್ದು ವಿಶೇಷವಾದ ವಿಚಾರಗಳಿಗಷ್ಟೆ. ಆದರೆ ನಮ್ಮ ಸನಾತನ ಧರ್ಮದ ಮೂಲದ ವಿಚಾರಗಳಾದ ಸ್ತೋತ್ರಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿರುವುದು ಅವರಮನೆ, ಬಡಾವಣೆ ಅಥವಾ ಮೈಸೂರಿಗೆ ಮಾತ್ರವಲ್ಲ ಸಮಸ್ತ ಹಿಂದೂಧರ್ಮಕ್ಕೆ ಹೆಮ್ಮೆ ಪಡುವ ವಿಷಯ ಎಂದು ತಿಳಿಸಿದರು.
ಶ್ರೀಯುತ ಜಿ.ಆರ್. ನಾಗರಾಜ್ರವರು ಪೃಥುವಿನ ವೇದ ಆಸಕ್ತಿ ಗಮನಿಸಿ ಅವನಿಗೆ ಕಳೆದ ವರ್ಷವೇ ಆದರ್ಶ ಬಾಲ ಪ್ರತಿಭಾ ರತ್ನ ಪ್ರಶಸ್ತಿ ನೀಡಿತ್ತು. ಅವನ ಈ ವಿಶ್ವದಾಖಲೆ ನಿರ್ಮಿಸಿರುವುದನ್ನು ಗಮನಿಸಿ ಸ್ವತಃ ಪೇಜಾವರ ಶ್ರೀಗಳೇ ದೂರವಾಣಿ ಮೂಲಕ ಅವನನ್ನುಅಭಿನಂದಿಸಿದ್ದಾರೆ ಎಂದರೆ ಈ ರೀತಿಯ ವಿಶ್ವದಾಖಲೆಗಳ ಮಹತ್ವವೇ ಬೇರೆ. ಮಕ್ಕಳ ಆಸಕ್ತಿ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು ಹಾಗಾದರೆ ಮಾತ್ರ ಯಶಸ್ಸು ಸಾಧ್ಯವೆಂದು ತಿಳಿಸಿದರು.
ಸಮಿತಿಯ ನಿರ್ದೇಶಕರಾದ ಪಿ. ಟಿ. ಮಹೇಶಪ್ಪ ಸಮಿತಿಯು ಇದುವರೆಗೂ ಮಾಡಿರುವ ಕೆಲಸಗಳನ್ನು ಸಭೆಗೆ ವಿವರಿಸಿದರು. ಕಾರ್ಯದರ್ಶಿ ನಾಗಭೂಷಣಾಚಾರಿ ಪೃಥು ತನ್ನ ಏಳನೇ ವಯಸ್ಸಿನಲ್ಲಿ ಇದೂವರೆಗೂ ಮಾಡಿರುವ ಸಾಧನೆಗಳಾದ ಅಂತರಾಷ್ಟ್ರೀಯ ಪರೀಕ್ಷೆಗಳಲ್ಲಿ ಆತ ಸತತವಾಗಿ ಶಾಲೆಗೆ ಪಡೆಯುತ್ತಿರುವ ಮೊದಲನೇ ರ್ಯಾಂಕ್,ಸ್ಟೈಲಿಶ್ ಕಿಡ್ ಅವಾರ್ಡ್ ಸೂಪರ್ ಡ್ಯಾನ್ಸ್ ಶೋಗಳ ಬಗ್ಗೆ ವಿವರಿಸಿದರು.
ಸಮಿತಿಯ ಉಪಾಧ್ಯಕ್ಷರಾದ ರಾಮಕೃಷ್ಣ ಮಾತನಾಡಿ ನಮ್ಮ ಬಡಾವಣೆಯ ಮಗುವೊಂದು ಇಷ್ಟು ಸಾಧನೆ ಮಾಡಿರುವುದು ನಮಗೆಲ್ಲ ಸಂತೋಷ ತಂದಿದೆ ಆದ್ದರಿಂದ ನಾವೆಲ್ಲ ಸಮಿತಿಯವರು ಸೇರಿ ಪೃಥುವನ್ನು ಅಭಿನಂದಿಸಬೇಕೆಂದು ತಿರ್ಮಾನಿಸಿದಾಗ ನಮ್ಮ ಕಾರ್ಯದರ್ಶಿಗಳಾದ ನಾಗಭೂಷಣಾಚಾರಿ ಪೃಥುವಿಗೆ “ಬಾಲ ಸ್ತೋತ್ರ ಕಲಾರತ್ನ” ಎಂಬ ಬಿರುದನ್ನು ಸಹ ಸೂಚಿಸಿದರು ಎಂದು ತಿಳಿಸಿದರು.

ಅಭಿನಂದನಾ ಸಮಾರಂಭಕ್ಕೆ ಮೂಕಾಂಬಿಕ ಸಮೃದ್ದಿ ಬಡಾವಣೆಯ ನಿವಾಸಿಗಳು ಹಾಗೂ ಸದಸ್ಯರು, ಆದರ್ಶಸೇವಾ ಸಂಘದ ಸದಸ್ಯರು, ಕೇಂದ್ರ ರೇಷ್ಮೇ ಮಂಡಳಿ ನೌಕರರು, ವಿಶ್ವ ಹಿಂದೂಪರಿಷತ್, ಶಾರದಾದೇವಿನಗರ ಬ್ರಾಹ್ಮಣ ಸಂಘ, ಶ್ರೀರಾಂಪುರ ಬ್ರಾಹ್ಮಣ ಸಂಘ, ಸಮಾಜಸೇವಕಿ ಕಮಲಾ ನಟರಾಜನ್, ಆರ್ ಜೆ ಅವಿನಾಶ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪೃಥುವಿಗೆ ಅಭಿನಂದನೆ ಸಲ್ಲಿಸಿದರು.ಶ್ರೀಮತಿ ಶುಭ ಅರುಣ್ ಮತ್ತು ತಂಡ ಪ್ರಾರ್ಥನೆ ಮಾಡಿದರು ಹಾಗೂ ನೆರೆದಿದ್ದ ಎಲ್ಲರಿಗೂ ಖಜಾಂಚಿ ರಮೇಶ ವಂದನಾರ್ಪಣೆ ಸಲ್ಲಿಸಿದರು.