ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದ ಬಂದ್ ಕರೆಗೆ ೩೬ ಖಾಸಗಿ ಸಾರಿಗೆ ಸಂಘಟನೆಗಳು ಬೆಂಬಲ ನೀಡಿವೆ. ಇಂದು ಭಾನುವಾರ ಮಧ್ಯರಾತ್ರಿ ೧೨ ಗಂಟೆಯಿಂದ ಸೋಮವಾರ ಮಧ್ಯರಾತ್ರಿ ೧೨ರವರೆಗೆ ಖಾಸಗಿ ಸಾರಿಗೆಗಳು ಬೆಂಗಳೂರಲ್ಲಿ ಸಂಚರಿಸುವುದಿಲ್ಲ. ನಾಳೆ ಬೆಳಗ್ಗೆ ೧೦ ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‌ವರೆಗೆ ರ್‍ಯಾಲಿ ನಡೆಸುತ್ತೇವೆ. ಪ್ರತಿಭಟನೆಗೆ ಖಾಸಗಿ ಬಸ್‌ಗಳ ಮಾಲೀಕರು ಆಗಮಿಸಲಿದ್ದಾರೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದರು.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿಭಟನೆಗೆ ರಾಮನಗರ, ಮೈಸೂರು, ಕನಕಪುರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆಯಿಂದ ಖಾಸಗಿ ಬಸ್ ಮಾಲೀಕರು ತಮ್ಮ ತಮ್ಮ ಬಸ್ಸುಗಳ ಮೂಲಕ ಬರುತ್ತಿದ್ದಾರೆ. ಬೆಂಗಳೂರಿನ ಮೂಲೆ ಮೂಲೆಗಳಿಂದ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ಕೆಂಗೇರಿ, ಹೆಬ್ಬಾಳ, ಕೆ.ಆರ್ ಪುರಂ, ಚಾಲಕರು ಬರುತ್ತಿದ್ದಾರೆ. ಈ ರ್ಯಾಲಿಯಲ್ಲಿ ೩ ರಿಂದ ೫ ಸಾವಿರ ಜನರು ಸೇರುಸುತ್ತೇವೆ. ಸೋಮವಾರ ೭ ರಿಂದ ೧೦ ಲಕ್ಷ ವಾಹನಗಳು ಸಂಚಾರ ಮಾಡಲ್ಲ ಎಂದು ತಿಳಿಸಿದರು.
ವೈಟ್ ಬೋರ್ಡ್‌ನಲ್ಲಿ ಬಾಡಿಗೆ ಹೊಡೆಯಲಾಗುತ್ತಿದೆ. ಶಕ್ತಿ ಯೋಜನೆಯಿಂದ ನಮಗೆ ದೊಡ್ಡ ಮಟ್ಟದಲ್ಲಿ ಹೊಡೆತ ಆಗಿದೆ. ಱಪಿಡೋ ಬೈಕ್ ಟ್ಯಾಕ್ಸಿಯಿಂದಲೂ ನಮಗೆ ತುಂಬಾ ಸಮಸ್ಯೆ ಆಗಿದೆ ಇದನ್ನು ಸರ್ಕಾರ ನಿಲ್ಲಿಸಬೇಕು. ಇಂದು ರಾತ್ರಿಯೊಳಗೆ ಸಚಿವರು ಲಿಖಿತ ರೂಪದಲ್ಲಿ ಬೇಡಿಕೆ ಈಡೇರಿಸಿದರೇ ಬಂದ್ ಹಿಂಪಡೆಯುತ್ತೇವೆ ಎಂದು ತಿಳಿಸಿದರು.
ಐಟಿಬಿಟಿ ಕಂಪನಿಗಳು ವರ್ಕ್ ಫ್ರಂ ಹೋಂ ಕೊಟ್ಟಿವೆ, ಶಾಲೆಗಳು ರಜೆ ಘೋಷಣೆ ಮಾಡಿವೆ. ನಮ್ಮ ಈ ಬಂದ್ ಮತ್ತಷ್ಟು ಶಕ್ತಿ ಕೊಟ್ಟಿದೆ. ಸಚಿವರು ಇವತ್ತು ರಾತ್ರಿಯೊಳಗೆ ಲಿಖಿತ ರೂಪದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿದರೇ ಬಂದ್ ವಾಪಸ್ ಪಡೆದುಕೊಳ್ಳುತ್ತೇವೆ. ಯಾವುದೇ ಸರ್ಕಾರ ಇದ್ದರೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
೧೬ ಸಾವಿರ ವಾಹನಗಳು ನಾಳೆ ಬಂದ್‌ನಲ್ಲಿ ಭಾಗವಹಿಸುತ್ತೇವೆ: ಸುಮಾರು ೧೬ ಸಾವಿರ ವಾಹನಗಳು ನಾಳೆ ಬಂದ್‌ನಲ್ಲಿ ಭಾಗವಹಿಸುತ್ತೇವೆ. ಸರ್ಕಾರಕ್ಕೆ ನಾವು ಹಲವು ಮನವಿಗಳನ್ನು ಸಲ್ಲಿಸಿದ್ದೇವೆ. ೨೦೧೩ರಲ್ಲಿ ರಾಮಲಿಂಗಾರೆಡ್ಡಿ ಇದ್ದಾಗಲೇ ಬೃಹತ್ ಹೋರಾಟ ಮಾಡಿದ್ದೇವೆ. ಆಗ ಅವರೇ ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದರು. ಈಗಾಗಲೇ ನಾವು ಖಾಸಗಿ ಶಾಲಾಗಳಿಗೆ ನಾವು ಮನವಿ ಮಾಡಿದ್ದೇವೆ ಎಂದು ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ಚಾಲಕರ ಸಂಘ ಅಧ್ಯಕ್ಷ ಷಣ್ಮುಮುಗಂ ತಿಳಿಸಿದರು.
೨೫ ರಿಂದ ೩೦ ವರ್ಷಗಳಿಂದ ಸ್ಕೂಲ್ ಪರ್ಮಿಟ್ ಕೇಳುತ್ತಿದ್ದೇವೆ. ಇದಕ್ಕೆ ಆರ್‌ಟಿಓ ಅಧಿಕಾರಿಗಳು ೧೫ ರಿಂದ ೨೦ ಸಾವಿರ ರುಪಾಯಿ ದಂಡ ಹಾಕುತ್ತಿದ್ದಾರೆ. ಅದನ್ನು ದಯವಿಟ್ಟು ಸರ್ಕಾರ ನಿಲ್ಲಿಸಬೇಕು. ಬೆಂಗಳೂರಲ್ಲಿ ೧೫ ರಿಂದ ೨೦ ಸಾವಿರ ಶಾಲೆಗಳಿವೆ. ನಮ್ಮ ಯೂನಿಯನ್ ಸದಸ್ಯರು ಎಲ್ಲಾ ಶಾಲೆಗಳಿಗೆ ಹೋಗಿ ಮನವಿ ಮಾಡಿದ್ದಾರೆ. ಅವರು ಎಲ್ಲರೂ ಈ ಬಂದ್‌ಗೆ ಬೆಂಬಲ ಕೊಟ್ಟಿದ್ದಾರೆ.
ಖಾಸಗಿ ಶಾಲಾ ವಾಹನಗಳು ನಾಳೆ ನೂರಕ್ಕೆ ನೂರರಷ್ಟು ಬಂದ್ ಆಗುತ್ತದೆ. ನಾವು ಈಗಾಗಲೇ ಪೋಷಕರಿಗೂ ಮನವಿ ಮಾಡಿದ್ದೇವೆ. ದಯವಿಟ್ಟು ಪೋಷಕರು ನಮ್ಮನ್ನು ಕ್ಷಮಿಸಿ ಇದು ಒಂದು ದಿನ ನಮ್ಮನ್ನು ಬಿಟ್ಟುಕೊಡಿ. ಹಲವಾರು ವರ್ಷಗಳ ಬೇಡಿಕೆ ಇದೆ ಹಾಗಾಗಿ ನಮಗೆ ಬೆಂಬಲ ಕೊಡಿ ಎಂದು ಪೋಷಕರಲ್ಲಿ ಕೈ ಮುಗಿದು ಮನವಿ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಚಾಲಕರ ಯೂನಿಯನ್ ರಾಜ್ಯಾಧ್ಯಕ್ಷ ಜಿ ರವಿ ಕುಮಾರ್ ಮನವಿ ಮಾಡಿದರು.
ಬಂದ್‌ಗೆ ಓಲಾ ಉಬರ್ ಮಾಲೀಕರು ಚಾಲಕರ ಸಂಘ ಬೆಂಬಲ: ಹಲವು ಸಂಘಟನೆ ಒಕ್ಕೂಟದ ಮುಖಾಂತರ ಸೋಮವಾರ ಬೆಂಗಳೂರು ಬಂದ್?ಗೆ ಕರೆ ನೀಡಿದ್ದಾರೆ. ಈ ಬಂದ್ ಗೆ ನಮ್ಮ ಬೆಂಬಲ ಇದೆ. ರ್ಯಾಪಿಡೋ ವಿಚಾರದಲ್ಲಿ ಸಾಕಷ್ಟು ನೋವಿದೆ. ಹೀಗಾಗಿ ನಾವು ಬಂದ್?ಗೆ ಬೆಂಬಲ ಕೊಡುತ್ತಿದ್ದೇವೆ. ಆದರೆ ಯಾರಿಗೂ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ. ಸೇವೆ ನೀಡುವುದು ಬಿಡುವುದು ಅವರಿಗೆ ಬಿಟ್ಟಿರುವ ವಿಚಾರ. ಅನಧಿಕೃತವಾಗಿ ರನ್ ಆಗುತ್ತಿರುವ ರ್ಯಪಿಡೋ ಬ್ಯಾನ್ ಬೇಡಿಕೆ ಸಂಬಂಧ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಓಲಾ ಉಬರ್ ಮಾಲೀಕರು ಚಾಲಕರ ಸಂಘ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದರು.