ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ಹಾಗೂ ಆಡಳಿತ ವೈಫಲ್ಯಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಟೀಕಿಸಿ ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಕಿಡಿಕಾರಿರುವ ಅವರು, ಮೋದಿಜೀ ಹೇಳುವ ಮಾಸ್ಟರ್ ಸ್ಟ್ರೋಕ್‌ಗಳ ಪರಿಣಾಮ ದೇಶದ ಮೇಲೆ ಸ್ಟ್ರೋಕ್ ಆಗಿದೆ ಎಂದು ಕುಟುಕಿದ್ದು, ಈ ಹಿನ್ನೆಲೆಯಲ್ಲಿ ಡಾಲರ್ ಹಾಗೂ ಜಿಡಿಪಿ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ದೇಶ ಅರ್ಥ ವ್ಯವಸ್ಥೆಯಲ್ಲಿ ಪಾತಾಳ ಕಾಣುತ್ತಿದೆ. ಇನ್ನಾದರೂ ಪ್ರಧಾನ ಮಂತ್ರಿಯವರು, ಕಣ್ತೆರದು ನೋಡಲಿ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಪೋಸ್ಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಹಲವು ಆರ್ಥಿಕ ಸೂಚ್ಯಂಕಗಳು ಮತ್ತು ಅಂತಾರಾಷ್ಟ್ರೀಯ ವರದಿಗಳನ್ನು ಉಲ್ಲೇಖಿಸಿ, ದೇಶದ ಸ್ಥಿತಿ ಗಂಭೀರವಾಗುತ್ತಿರುವುದನ್ನು ಕಳವಳದಿಂದ ದಾಖಲಿಸಿ ಡಾಲರ್ ಎದುರು ರೂಪಾಯಿ ಇತಿಹಾಸದಲ್ಲೇ ಕುಸಿತ ಕಂಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ರೂಪಾಯಿಯನ್ನು ಬಲಪಡಿಸೋಣ ಎಂದವರು ಈಗ ಅದನ್ನೇ ಐಸಿಯು ಗೆ ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೊಂದು ಪ್ರಮುಖ ವಿಚಾರವಾಗಿ, ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ನೀಡಿದ ಭಾರತದ ಜಿಡಿಪಿ ಅಂಕಿಅಂಶಗಳಿಗೆ ʼಸಿʼ ಗ್ರೇಡ್ ಎಂದು ಟೀಕೆಗಳಲ್ಲಿ ತಿಳಿಸಿದ್ದಾರೆ. ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೆ, ಅಂತಾರಾಷ್ಟ್ರೀಯ ಸಂಸ್ಥೆಗಳು ನೀಡುತ್ತಿರುವ ಗ್ರೇಡ್ ಏಕೆ ಇಷ್ಟು ಕಡಿಮೆ? ಎಂದು ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ ಮತ್ತೊಂದು ಗಂಭೀರ ಮಾಹಿತಿ ಹಂಚಿಕೊಂಡಿರುವ ಅವರು, ಕಳೆದ ಐದು ವರ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು ಕಂಪನಿಗಳು ಮುಚ್ಚಲ್ಪಟ್ಟಿವೆ. ಈ ಕುರಿತು ಕೇಂದ್ರ ಸರ್ಕಾರವೇ ನೀಡಿದ ಸಂಖ್ಯೆಗಳನ್ನು ಉಲ್ಲೇಖಿಸಿ ಉದ್ಯೋಗ ಸೃಷ್ಟಿಸುವ ಬದಲು ಉದ್ಯಮಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಉದ್ಯೋಗ ಕಳೆದುಕೊಂಡವರ ಭದ್ರತೆಗೆ ಯಾವುದೇ ರಾಷ್ಟ್ರೀಯ ಯೋಜನೆ ಇಲ್ಲ, ಇದು ಯಾವ ಮಾದರಿ? ಎಂದು ವ್ಯಂಗವಾಡಿದ್ದಾರೆ. ಪಾಸ್ಪೋರ್ಟ್ ರ್ಯಾಂಕಿಂಗ್ ಕುಸಿತದ ಕುರಿತು ಕೂಡ ಖರ್ಗೆ ಟೀಕೆಯ ಭಾಗವಾಗಿದೆ. ಅಂತರರಾಷ್ಟ್ರೀಯ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಭಾರತ ಕೆಳಗಿನ ಸ್ಥಾನಕ್ಕೆ ಜಾರಿರುವುದನ್ನು ಉಲ್ಲೇಖಿಸಿ, ವಿಶ್ವಗುರು ಕನಸಿನಿಂದ ಪಾತಾಳ ರ್ಯಾಂಕಿಂಗ್ ವಾಸ್ತವಕ್ಕೆ ಬಂದಿದ್ದೇವೆ ಎಂದಿದ್ದಾರೆ.
ಬಿಜೆಪಿ ಕರ್ನಾಟಕ ಘಟಕವು ಕೇಂದ್ರ ಸರ್ಕಾರದ ಪ್ರತಿಯೊಂದು ನಿರ್ಧಾರವನ್ನೂ ಮಾಸ್ಟರ್ ಸ್ಟ್ರೋಕ್ ಎಂದು ಹೊಗಳುತ್ತಿರುವುದನ್ನು ಟೀಕಿಸಿ, ರೂಪಾಯಿ ಕುಸಿತ? ಮಾಸ್ಟರ್ ಸ್ಟ್ರೋಕ್! ಉದ್ಯೋಗ ಹಾನಿ? ಮಾಸ್ಟರ್ ಸ್ಟ್ರೋಕ್! ಕಂಪನಿಗಳು ಮುಚ್ಚಲ್ಪಡುವುದು? ಅದೂ ಮಾಸ್ಟರ್ ಸ್ಟ್ರೋಕ್! ದೇಶವೇ ಹಿಂಬಾಲಿಸಿದರೂ ಇವರಿಗೆ ಕೇವಲ ಪಿಆರ್ ಮಾತ್ರ ಮುಖ್ಯ ಎಂದು ಪ್ರಿಯಾಂಕ್ ಕಿಡಿಕಾರಿದ್ದಾರೆ. ಸಾಮಾನ್ಯ ಜನರ ಬದುಕು ದುಬಾರಿಯಾಗುತ್ತಿರುವುದು, ಯುವಕರ ಉದ್ಯೋಗ ಸಮಸ್ಯೆಗಳು ತೀವ್ರಗೊಳ್ಳುತ್ತಿರುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವ ಕುಸಿಯುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಕೇಂದ್ರದ ನಿರ್ಧಾರಗಳ ಪರಿಣಾಮ ದೇಶವೇ ಹೊಣೆ ಹೊರುತ್ತಿದೆ, ಆದರೆ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.



