ಕೆ.ಆರ್.ನಗರ : ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ನಮ್ಮ ನಾಡಿನ ಹೆಮ್ಮೆಯಾಗಿದ್ದು ಅಂತಹ ಜನಪರ ನಾಯಕ ಕನ್ನಡ ಮಣ್ಣಿನಲ್ಲಿ ಜನಿಸಿದ್ದು ಎಲ್ಲರ ಪುಣ್ಯ ಎಂದು ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.
ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿ ತಾಲೂಕು ಜೆಡಿಎಸ್ ವತಿಯಿಂದ ನಡೆದ ಮಾಜಿ ಪ್ರಧಾನ ಮಂತ್ರಿಗಳ 94 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಇಡೀ ಜೀವನವನ್ನು ಜನ ಸೇವೆಗೆ ಮುಡುಪಾಗಿಟ್ಟ ಅಂತಹ ನಾಯಕರು ಅಪರೂಪ ಎಂದರು.
ಕರ್ನಾಟದ ರಾಜ್ಯ ದೇಶದಲ್ಲಿ ಮಂಚೂಣಿಯಲ್ಲಿರಲು ಹೆಚ್.ಡಿ.ದೇವೇಗೌಡರ ಅಧಿಕಾರ ಅವಧಿಯಲ್ಲಿ ಕೈಗೊಂಡ ನೂರಾರು ಜನ ಮತ್ತು ರೈತ ಪರವಾದ ಕೆಲಸಗಳು ಕಾರಣವಾಗಿದ್ದು ಅವರ ಅಭಿವೃದ್ದಿ ಕೆಲಸಗಳು ಹಾಗೂ ಯೋಜನೆಗಳು ದೇಶಕ್ಕೆ ಮಾದರಿ ಎಂದು ಕೊಂಡಾಡಿದರು. ರೈತ ಕುಟುಂಬದಲ್ಲಿ ಜನಿಸಿದ ಅವರು ರಾಜಕೀಯ ಕ್ಷೇತ್ರದಲ್ಲಿ ತಾವೂ ಮುಗಿಲೆತ್ತರಕ್ಕೆ ಬೆಳೆಯುವುದರ ಜತೆಗೆ ಸಾವಿರಾರು ಮಂದಿ ನಾಯಕರನ್ನು ಹುಟ್ಟು ಹಾಕಿದ ರಾಜಕೀಯ ಮುತ್ಸದ್ದಿ ನೂರ್ಕಾಲ ಬಾಳಲಿ ಎಂದು ಶುಭ ಹಾರೈಸಿದರು.
ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪ್ರಾದೇಶಿಕ ಪಕ್ಷ ಹುಟ್ಟುಹಾಕಿ ಅದನ್ನು 25 ವರ್ಷಗಳ ಕಾಲ ನಿರಂತರವಾಗಿ ಮುನ್ನಡೆಸಿ ಯಶಸ್ವಿಯಾಗಿರುವ ದೇವೇಗೌಡರಿಗೆ ಅವರೆ ಸಾಟಿ ಎಂದ ಕೆ.ಎನ್.ಬಸಂತ್ ದೇಶದ ರಾಜಕೀಯ ನಾಯಕರುಗಳಿಗೆ ಅವರು ಆದರ್ಶನೀಯ ಎಂದು ನುಡಿದರು.
ಇದಕ್ಕೂ ಮೊದಲು ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರುಗಳು ಹಾಗೂ ಹೆಚ್.ಡಿ.ದೇವೇಗೌಡರ ಅಭಿಮಾನಿಗಳು ಪಟ್ಟಣದ ಹೊರ ವಲಯದಲ್ಲಿರುವ ಮೀನಾಕ್ಷಿ ಸಮೇತ ಅರ್ಕೇಶ್ವರ ದೇವಾಲಯದಲ್ಲಿ ಮಾಜಿ ಪ್ರಧಾನಿಗಳ ದೀರ್ಘಾಯುಸ್ಸಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಹಾಜರಿದ್ದವರು ಮಣ್ಣಿನ ಮಗ ಹೆಚ್.ಡಿ.ದೇವೇಗೌಡರು ನೂರ್ಕಾಲ ಬದುಕಿ ದೇಶದ ಏಳಿಗೆಗೆ ಮಾರ್ಗದರ್ಶನ ಮಾಡಲಿ ಎಂದು ಬಯಸಿ ಜಯಕಾರದ ಘೋಷಣೆ ಮೊಳಗಿಸಿದರು.

ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್, ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಎಂ.ಟಿ.ಅಣ್ಣೇಗೌಡ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪುರಸಭೆ ಮಾಜಿ ಸದಸ್ಯರಾದ ಸಂತೋಷ್ ಗೌಡ, ಉಮೇಶ್, ಮುಖಂಡರಾದ ಹೆಚ್.ಪಿ.ಗೋಪಾಲ್, ಬಸವಾಪಟ್ಟಣ ಯೋಗೇಶ್, ಹೊಸಹಳ್ಳಿಪುಟ್ಟರಾಜು, ಚೌಕಹಳ್ಖಿರೇವಣ್ಣ, ಎಸ್.ವಿ.ಪ್ರಕಾಶ್, ಮಲ್ಲಪ್ಪ, ಲಾಲನಹಳ್ಳಿಮಹೇಶ್, ಹೆಚ್.ಪಿ.ಶಿವಣ್ಣ, ಮಿರ್ಲೆಸುಜಯ್ ಗೌಡ, , ಸಿ.ಆರ್.ಡಿಂಡಿಮ, ಮುಭಾರಕ್, ಕಗ್ಗೆರೆಕುಚೇಲ, ಸಿ.ವಿ.ಗುಡಿಶಂಭು, ದಾಕ್ಣಾಯಿಣಿ, ರಾಜಲಕ್ಷ್ಮಿ, ಹೆಚ್.ಆರ್‌ಮದುಚಂದ್ರ, ಹಂಪಾಪುರಸುರೇಶ್, ಕೇಶವ ಮತ್ತಿತರರು ಇದ್ದರು.



