ಮಂಡ್ಯ: ಮಂಡ್ಯ ಮಿಮ್ಸ್ ರೋಗ-ರುಜಿನಗಳ ಉತ್ಪಾದನಾ ಕೇಂದ್ರವಾಗಿದ್ದು, ಸಾರ್ವಜನಿಕರಲ್ಲಿ ಡೆಂಘೀ ಜಾಗೃತಗೊಳಿಸುವ ಮುನ್ನ ನಿಮ್ಮ ಪರಿಸರ ಶುಚಿಗೊಳಿಸುವಂತೆ ಕನ್ನಡಪರ ಹೋರಾಟಗಾರ ಎಂ.ಬಿ.ನಾಗಣ್ಣಗೌಡರು ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಈ ನಡುವೆಯೂ ಮಿಮ್ಸ್ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಶುಚಿತ್ವ, ಮುನ್ನೆಚ್ಚರಿಕಾ ಕ್ರಮವಿಲ್ಲದೇ ಆಸ್ಪತ್ರೆ, ಮೆಡಿಕಲ್ ಕಾಲೇಜು ಆವರಣ ಗಬ್ಬೆದ್ದು ನಾರುತ್ತಿದೆ. ಒಳ ಚರಂಡಿ, ಮಳೆ ನೀರು ನಿಂತಲ್ಲೇ ನಿಂತಿದ್ದು, ಗಲೀಜು ನೀರಿನ ವಾಸನೆಯಿಂದ ಆಸ್ಪತ್ರೆ ಆವರಣ ಗಬ್ಬೆದ್ದು ನಾರುತ್ತಿದೆ.
ನಿಂತಲ್ಲೇ ನಿಂತಿರುವ, ಸೋರುವ, ಪಾಚಿ ಕಟ್ಟಿಕೊಂಡ ಕಡೆಯಲೆಲ್ಲ ಸೊಳ್ಳೆಗಳು ಹೆಚ್ಚಾಗಿದ್ದು, ಕಿಟಕಿ, ಗಾಜುಗಳಿಲ್ಲದೇ ವಾರ್ಡ್ ಗಳಿಗೆ ನುಗ್ಗುತ್ತಿವೆ. ರಾತ್ರಿ ಮಾತ್ರವಲ್ಲ, ಹಗಲಲ್ಲೂ ಸೊಳ್ಳೆಗಳ ಹಾವಳಿಯಿಂದ ರೋಗಿಗಳು, ಸಂಬಂಧಿಕರು ಬೇಸತ್ತಿದ್ದಾರೆ.
ಮೆಡಿಕಲ್ ಕಾಲೇಜು, ಆಸ್ಪತ್ರೆ, ಐಸಿಯು, ಜನರಲ್ ವಾರ್ಡ್, ಸುಟ್ಟ ಗಾಯದ ವಾರ್ಡ್, ಕ್ಷಯ ರೋಗಿಗಳ ವಾರ್ಡ್, ಕ್ಯಾಂಟೀನ್, ಶವಾಗಾರ ಸುತ್ತಲೂ ಅಶುಚಿತ್ವ ತಾಂಡವವಾಡುತ್ತಿದೆ.
ಅನಧಿಕೃತ ನಿರುಪಯುಕ್ತ ವಸ್ತುಗಳ ವಿಲೇವಾರಿ ಘಟಕ ಆಸ್ಪತ್ರೆ ಆವರಣದಲ್ಲೇ ಇದ್ದು, ಹಾಸಿಗೆ, ದಿಂಬು, ಮಂಚ, ಕುರ್ಚಿ, ವೀಲ್ ಚೇರ್, ಸ್ಟ್ರೆಕ್ಚರ್ ಸೇರಿದಂತೆ ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿದ್ದಾರೆ.
ಬೆಂಗಾಡಿನಂತೆ ಬೆಳೆದ ಗಿಡ ಗಂಟಿಗಳ ನಡುವೆ ಸರೀಸೃಪಗಳ ಸಂಚರಿಸುತ್ತಿವೆ. ಆದ್ದರಿಂದ ಕೂಡಲೇ ಆಸ್ಪತ್ರೆ ಆವರಣವನ್ನ ಶುಚಿಗೊಳಿಸುವಂತೆ ಹಾಗೂ ಆಸ್ಪತ್ರೆಗೆ ಬರುವ ರೋಗಿಗಗಳು, ಸಂಬಂಧಿಕರನ್ನು ರೋಗ-ರುಜಿನಗಳಿಂದ ಪಾರು ಮಾಡುವಂತೆ ಕನ್ನಡಪರ ಹೋರಾಟಗಾರ ಎಂ.ಬಿ.ನಾಗಣ್ಣಗೌಡರು ಆಗ್ರಹಿಸಿದ್ದಾರೆ.