ಮೈಸೂರು : ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೋದಿ ಪರ ಘೋಷಣೆ ಕೂಗುವ ಪ್ರವೃತ್ತಿ ನಿಲ್ಲಿಸದಿದ್ದರೆ ಬಿಜೆಪಿ ಕೇಂದ್ರ ಸಚಿವರು, ಸಂಸತ್ ಸದಸ್ಯರು, ಶಾಸಕರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಪ್ರತಿ ಘೋಷಣೆ ಕೂಗಬೇಕಾಗುತ್ತದೆ. ಮೋದಿ ಪರ ಘೋಷಣೆ ಕೂಗುವುದರ ಮೂಲಕ ಕೇಂದ್ರ ಸರ್ಕಾರದ ಜನ ವಿರೋಧಿ ಅಲೆಯನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಮಾತನಾಡುವಾಗ ಮೋದಿ ಮೋದಿ ಎನ್ನುವ ಘೋಷಣೆ ಕೂಗಿ ಮಾತನ್ನಾಡದಂತೆ ಬೆದರಿಕೆ ಹಾಕುವುದು ತೀರಾ ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ದಿ. ಆಸ್ಕರ್ ಫರ್ನಾಂಡಿಸ್ ಹಾಗೂ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಅವರ ಶ್ರಮದ ಫಲ ಈ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಸಾಧ್ಯವಾಗಿದೆ. ಹೀಗಿರುವಾಗ ಬಿಜೆಪಿ ಕಾರ್ಯಕರ್ತರು ಮೋದಿಗೆ ಜೈಕಾರ ಹಾಕುವುದರ ಮೂಲಕ ಕಾಂಗ್ರೆಸ್ ಸರ್ಕಾರದ ಯಶಸ್ವಿ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪ ಮಾಡದಂತೆ ತಡೆ ಒಡ್ಡುತ್ತಿರುವುದು ಖಂಡನೀಯ. ಇಂತಹ ಬೇಜವಾಬ್ದಾರಿ ವರ್ತನೆಯಿಂದ ಜನತೆಗೆ ತಪ್ಪು ಸಂದೇಶ ನೀಡುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಬೇಕಾಗುತ್ತದೆ. ಇಂತಹ ಗೊಡ್ಡು ಘೋಷಣೆಗಳಿಗೆ ಕಾಂಗ್ರೆಸ್ ಮಣಿಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.