ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ನಾವು ಬರೆದ ಪತ್ರಕ್ಕೆ ಕೇಂದ್ರ ಸರ್ಕಾರದಿಂದ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಪಾಸ್‌ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭಿಸಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸುಮ್ಮನೆ ಅವರು, ಇವರು ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಫೋನ್ ಟ್ಯಾಪಿಂಗ್ ಯಾರು ಮಾಡುತ್ತಿದ್ದಾರೆ ಯಾರದ್ದು ಮಾಡಿದ್ದಾರೆ ಎಂಬುದು ಗೊತ್ತಿದ್ದರೆ ಹೇಳಲಿ. ಬಾಯಿಗೆ ಬಂದಿದ್ದು ಹೇಳಿದರೆ ಯಾರು ಕೇಳುತ್ತಾರೆ ದೇಶದಲ್ಲಿ, ರಾಜ್ಯದಲ್ಲಿ ಕಾನೂನು ಇದೆ. ಕಾನೂನು ಹೊರತುಪಡಿಸಿ ನಾವ್ಯಾರು ಏನೂ ಮಾಡಲಾಗುವುದಿಲ್ಲ ಎಂದರು.
ಎಚ್ ಡಿ ದೇವೆಗೌಡರು ಪ್ರಜ್ವಲ್‌ಗೆ ಪತ್ರ ಬರೆದಿದ್ದಾರೆ ಎಂಬುದು ಗೊತ್ತಾಗಿದೆ. ಅದು ಅವರ ಕುಟುಂಬದ ಆಂತರಿಕ ವಿಚಾರ ಇರಬಹುದು. ಪ್ರಜ್ವಲ್ ರೇವಣ್ಣ ಸಾರ್ವಜನಿಕ ದೃಷ್ಟಿಯಿಂದ ದೇವೇಗೌಡ ಅವರ ಪತ್ರಕ್ಕೆ ಗೌರವ ಕೊಟ್ಟು ದೇಶಕ್ಕೆ ವಾಪಸ್ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.