ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರು ಜಗದೀಶ್ ಆಪ್ತರಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೌಂದರ್ಯ ಜಗದೀಶ್ ಅವರು ಡೆತ್‌ನೋಟ್ ಬರೆದಿದ್ದರು. ಅದನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದರು. ಅವರು ಬರೆದ ಡೆತ್‌ನೋಟ್‌ನಲ್ಲಿ ತಮ್ಮ ವ್ಯವಹಾರದಲ್ಲಿ ಆದ ನಷ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌಂದರ್ಯ ಜಗದೀಶ್ ಅವರು ಸೌಂದರ್ಯ ಕನ್ಸ್‌ಟ್ರಕ್ಷನ್ ಕಂಪನಿ ನಡೆಸುತ್ತಿದ್ದರು. ಬ್ಯುಸಿನೆಸ್ ಲಾಸ್‌ಗೆ ಪಾಲುದಾರರು ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಬರೋಬ್ಬರಿ ೬೦ ಕೋಟಿ ನಷ್ಟ ತೋರಿಸಿ ವಂಚನೆ ಮಾಡಿದ್ದಾರೆ. ಇದರಿಂದ ಆಘಾತಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಪತ್ತೆಯಾದ ಡೆತ್ ನೋಟ್ ಅನ್ನು ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಪಾಲುದಾರರ ವಿರುದ್ಧ ದೂರು ನೀಡಿದ್ದಾರೆ. ಸೌಂದರ್ಯ ಜಗದೀಶ್ ಅವರ ವ್ಯವಹಾರದ ಪಾಲುದಾರರಾಗಿರುವ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.