Monday, April 21, 2025
Google search engine

Homeರಾಜ್ಯಸುದ್ದಿಜಾಲಪ್ರೊ.ಭಗವಾನ್‌ಗೆ "ವರ್ತಮಾನದ ವೈಚಾರಿಕ ಭೀಷ್ಮ" ಪ್ರಶಸ್ತಿ

ಪ್ರೊ.ಭಗವಾನ್‌ಗೆ “ವರ್ತಮಾನದ ವೈಚಾರಿಕ ಭೀಷ್ಮ” ಪ್ರಶಸ್ತಿ

ಮೈಸೂರು: ಅಖಿಲ ಭಾರತ ವಕೀಲರ ಒಕ್ಕೂಟ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಹಿರಿಯ ಲೇಖಕ ಹಾಗೂ ವಿಚಾರವಂತರಾದ ಪ್ರೊ.ಕೆ.ಎಸ್.ಭಗವಾನ್ ಅವರಿಗೆ ವರ್ತಮಾನದ ವೈಚಾರಿಕ ಭೀಷ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಗರದಲ್ಲಿನ ಪ್ರೊ.ಭಗವಾನ್ ನಿವಾಸಕ್ಕೆ ತೆರಳಿದ ಒಕ್ಕೂಟದ ಪದಾಧಿಕಾರಿಗಳು ಭಗವಾನ್ ಅವರನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಭಗವಾನ್, ಇಂದಿನ ಯುವಜನತೆ ವಿದ್ಯಾವಂತರಾಗುತ್ತಿದ್ದಾರೆಯೇ ಹೊರತು ವಿಚಾರವಂತರಾಗುತ್ತಿಲ್ಲ. ಆದ್ದರಿಂದ ಯುವಜನತೆ ಕುವೆಂಪು ಅವರನ್ನು ಹೆಚ್ಚು ಹೆಚ್ಚು ಓದಿ ಅರ್ಥೈಸಿಕೊಳ್ಳುವುದರ ಜೊತೆಗೆ ವೈಚಾರಿಕತೆ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇತ್ತೀಚೆಗೆ ಸತ್ಯ ಹೇಳುವವರನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಯಾರಿಗೂ ಇಂದು ಸತ್ಯ ಬೇಕಾಗಿಲ್ಲ.

ಯುವಜನತೆ ಪದವೀಧರರಾಗುತ್ತಿದ್ದಾರೆಯೇ ಹೊರತು, ಅವರ ತಲೆಯಲ್ಲಿ ವಿಚಾರಗಳು ಇಲ್ಲ. ಹೀಗಾಗಿ ವೈಚಾರಿಕತೆ ಬೆಳೆಸಿಕೊಳ್ಳಲು ಮುಂದಾಗಬೇಕು. ಅದಕ್ಕಾಗಿ ಕುವೆಂಪು ಅವರನ್ನು ಓದಿಕೊಳ್ಳುವ ಜೊತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕುವೆಂಪು ಅವರು ಹೇಳಿದ ವಿಚಾರವನ್ನೇ ನಾನು ಪ್ರಸ್ತಾಪಿಸಿದ್ದಕ್ಕೆ ನನ್ನನ್ನು ಬ್ರಾಹ್ಮಣ ವಿರೋಧಿ, ಒಕ್ಕಲಿಗ ವಿರೋಧಿ ಎಂದು ಬಿಂಬಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಈ ಪ್ರಪಂಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮತ್ತೊಬ್ಬ ವಿದ್ಯಾಂಸರು ಇಲ್ಲವೇ ಇಲ್ಲ. ಎಲ್ಲರೂ ಅಂಬೇಡ್ಕರ್ ಅವರ ಬದುಕು, ಬರಹ, ಭಾಷಣಗಳ ಸಂಪುಟವನ್ನು ತಪ್ಪದೇ ಓದಿಕೊಳ್ಳಬೇಕು. ಇಂದು ದೇಶವನ್ನು ರಾಜ್ಯಾಂಗದ ಬದಲು ಪಂಚಾಂಗ ಆಳುತ್ತಿದೆ. ಇದು ತೊಲಗಬೇಕು ಎಂದರೆ ಎಲ್ಲರೂ ಸಂವಿಧಾನ ಓದಬೇಕು. ಅದನ್ನು ಅರ್ಥೈಸಿಕೊಂಡು ಬದುಕಬೇಕು ಎಂದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್, ರಾಜ್ಯ ಸಮಿತಿ ಸದಸ್ಯ ಪಿ.ಪಿ.ಬಾಬುರಾಜ್, ಚೇತನ್, ವಕೀಲರಾದ ಸೌಮ್ಯ, ಪಲ್ಲವಿ, ಯತೀಶ್, ಕಿಶೋರ್, ಎಚ್.ವಿ.ಪ್ರಕಾಶ್, ಸಚಿನ್ ಎಸ್.ಎಚ್, ಕಮಲೇಶ್, ಚೇತನ್ ಕುಮಾರ್ ಹಾಗೂ ಮಂಡ್ಯ ಪ್ರಗತಿಪರ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ, ಚಲನಚಿತ್ರ ನಿರ್ದೇಶಕ ಸಾಗರ್ ಹೊನಗಾನಹಳ್ಳಿ ಮತ್ತು ಯುವ ವಕೀಲರು ಹಾಜರಿದ್ದರು.

ರಾಮ ಎಂದಿಗೂ ಆದರ್ಶ ವ್ಯಕ್ತಿ ಆಗಿರಲಿಲ್ಲ. ರಾಜ್ಯದ ಆಡಳಿತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದ. ಭರತ ಮಾತ್ರ ಆಡಳಿತವನ್ನು ನೋಡಿಕೊಂಡಿದ್ದ. ಯಾವ ರೀತಿಯಲ್ಲೂ ರಾಮ ಆದರ್ಶ ವ್ಯಕ್ತಿಯೂ ಅಲ್ಲ, ರಾಜನೂ ಅಲ್ಲ. ರಾಮರಾಜ್ಯ ಎಂಬುದೇ ಬರೀ ಸುಳ್ಳಿನ ಕಂತೆ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ, ಉದ್ಘಾಟಿಸಲು ಹೊರಟಿದ್ದಾರೆ. ರಾಮಮಂದಿರ ಯಾಕೆ ಬೇಡ ಎಂಬ ಕೃತಿಯನ್ನು ಬರೆದಿದ್ದೇನೆ. ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡಲಾಗುವುದು.
-ಪ್ರೊ.ಕೆ.ಎಸ್.ಭಗವಾನ್, ಲೇಖಕರು

RELATED ARTICLES
- Advertisment -
Google search engine

Most Popular