Saturday, April 19, 2025
Google search engine

Homeಸ್ಥಳೀಯರಸಬಾಳೆ, ವೀಳ್ಯದೆಲೆ, ಮೈಸೂರು ಮಲ್ಲಿಗೆಗೆ ಉತ್ತೇಜನ

ರಸಬಾಳೆ, ವೀಳ್ಯದೆಲೆ, ಮೈಸೂರು ಮಲ್ಲಿಗೆಗೆ ಉತ್ತೇಜನ

ಮೈಸೂರು: ನಂಜನಗೂಡು ರಸಬಾಳೆ, ವೀಳ್ಯದೆಲೆ ಹಾಗೂ ಮೈಸೂರು ಮಲ್ಲಿಗೆ ಉಳಿಸಲು ತೋಟಗಾರಿಕೆ ಇಲಾಖೆಯಿಂದ ಉತ್ತೇಜನ ನೀಡಲಿದ್ದು, ರೈತರು ಸದುಪಯೋಗ ಮಾಡಿಕೊಳ್ಳುವಂತೆ ಉಪ ನಿರ್ದೇಶಕ ಮಂಜುನಾಥ್ ಅಂಗಡಿ ಹೇಳಿದರು.

ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿಯು ಗುರುವಾರ ಮೈಸೂರು ತಾಲೂಕು ಬ್ಯಾತಹಳ್ಳಿಯ ಮಾದಪ್ಪನವರ ತೋಟದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೇ.೫೦ರಷ್ಟು ಮಳೆ ಕಡಿಮೆಯಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ಈ ವಾರ ಮಳೆಯಾಗುವ ಮುನ್ಸೂಚನೆ ಇದೆ. ಇಲಾಖೆಯಿಂದ ನಂಜನಗೂಡು ರಸಬಾಳೆ, ವೀಳ್ಯದೆಲೆ ಹಾಗೂ ಮೈಸೂರು ಮಲ್ಲಿಗೆ ಉಳಿಸಲು ನೆರವು ನೀಡಲಾಗುವುದು. ಇದನ್ನು ರೈತರು ಪಡೆಯಬೇಕು ಎಂದರು.

ತೆಂಗಿನ ಗರಿಯಲ್ಲಿ ಹುಳುವಿನ ಬಾಧೆ ಕಂಡು ಬಂದಿದೆ. ಇದರ ನಿವಾರಣೆಗೆ ಹೈಸ್ಪೀಡ್ ಸ್ಪ್ರೇಯರ್ ಉಪಯೋಗಿಸಬೇಕು. ಸಾವಯವ, ಜೈವಿಕೆ ಕ್ರಮಗಳನ್ನು ಅನುಸರಿಸಬೇಕು. ಮಳೆಯಾದಲ್ಲಿ ಈ ಸಮಸ್ಯೆ ಕಡಿಮೆಯಾಗಬಹುದು ಎಂದರು,
ಕೃಷಿ ಇಲಾಖೆ ಉಪ ನಿರ್ದೇಶಕ ಧನಂಜಯ ಮಾತನಾಡಿ, ರೈತರು ಮೊದಲೆಲ್ಲಾ ತಾವೇ ಬಿತ್ತನೆಬೀಜ ತಯಾರು ಮಾಡಿಕೊಳ್ಳುತ್ತಿದ್ದರು. ಈಗ ಸರ್ಕಾರ ನೀಡುವ ಬಿತ್ತನೆಬೀಜಕ್ಕೆ ಕಾಯುತ್ತಾರೆ. ಇದು ಹೋಗಬೇಕು. ರಾಗಿ, ಭತ್ತ ಮೊದಲಾದ ಹಳೆಯ ತಳಿಗಳನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ರೈತರ ಆತ್ಮಹತ್ಯೆಗೆ ಕೇವಲ ಕೃಷಿ ಒತ್ತಡವೊಂದೆ ಕಾರಣವಲ್ಲ. ಸಾಲ ಸಿಗುತ್ತದೆ ಎಂದು ಸಾಲ ಮಾಡುವುದರಿಂದ ಸಾಮಾಜಿಕ, ಸಾಂಸಾರಿಕ ಒತ್ತಡಗಳೂ ಕಾರಣವಾಗುತ್ತಿವೆ ಎಂದರು.
ಕೃಷಿಕರು ಸೇರಿದಂತೆ ಎಲ್ಲರೂ ಜೀವನಶೈಲಿ ಹಾಗೂ ಆಹಾರ ಪದ್ಧತಿ ಬದಲಿಸಿಕೊಳ್ಳಬೇಕು. ತಾವು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸೌಲಭ್ಯ ಕಲ್ಪಿಸಿಕೊಳ್ಳಬೇಕು. ಕೇವಲ ಕಬ್ಬು, ಭತ್ತ ಮಾತ್ರವಲ್ಲದೇ ಅರೆ ನೀರಾವರಿ ಬೆಳೆಗಳನ್ನು ಬೆಳೆಯಬೇಕು ಎಂದು ಅವರು ಸಲಹೆ ಮಾಡಿದರು. ಈಗ ಆರ್‌ಟಿಸಿ ಡಿಜಿಟಲ್ ಮಾಡಿದ್ದು, ಒಂದು ಸಾರಿ ಆರ್‌ಟಿಸಿ ತಂದರೇ ಆಧಾರ್ ಕಾರ್ಡ್ ಇದ್ದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ? ಎಲ್ಲಾ ಸವಲತ್ತುಗಳನ್ನು ಪಡೆಯಬಹುದು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇತ್ತೀಚೆಗೆ ಕೋವಿಡ್ ಮಹಾಮಾರಿ ಎದುರಾದಾಗ ದಿನಸಿ ಹಾಗೂ ಔಷಽ ಅಂಗಡಿಗಳು ಮಾತ್ರ ತೆರೆದಿದ್ದವು. ಇದನ್ನು ಗಮನಿಸಿದರೆ ಎಲ್ಲರಿಗೂ ಅನ್ನ ನೀಡುವ ರೈತನ ಮಹತ್ವ ಅರಿವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ರೈತರಿಗೆ ಅನುಕೂಲ ಮಾಡಿಕೊಡುವ ಕಡೆ ಗಮನಹರಿಸಬೇಕು ಎಂದರು.
ರೈತ ಸಂಘದ ಗೌರವಾಧ್ಯಕ್ಷ ನಾಗನಹಳ್ಳಿ ವಿಜಯೇಂದ್ರ ಮಾತನಾಡಿ, ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿಯೇ ತಾವು ಹೋರಾಟಕ್ಕೆ ಬಂದಿದ್ದಾಗಿ ಹೇಳಿದರು.

ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬ್ಯಾತಹಳ್ಳಿ ಮಾದಪ್ಪ ಮಾತನಾಡಿ, ಸಾಧಕ ರೈತರನ್ನು ಗುರುತಿಸಿ ಪ್ರತಿ ತಿಂಗಳು ನಾವು ಸನ್ಮಾನಿಸಿಕೊಂಡು ಬರುತ್ತಿದ್ದೇವೆ. ಇದು ೩೦ನೇ ಕಾರ್ಯಕ್ರಮ ಎಂದರು.
ಕಬ್ಬು ಬೆಳೆಗಾರರು ಸೇರಿದಂತೆ ಎಲ್ಲಾ ವರ್ಗದ ರೈತರು ಹಲವಾರು ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದು, ಸರ್ಕಾರ ಮತ್ತು ಅಽಕಾರಿಗಳು ರೈತರ ನೆರವಿಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ರೈತ ಮುಖಂಡ ಪ್ರಭುಸ್ವಾಮಿ ಮಾತನಾಡಿ, ೧೯೭೫ಕ್ಕಿಂತ ಮೊದಲು ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸುತ್ತಾ ನೆಮ್ಮದಿಯಿಂದ ಇದ್ದರು. ನಂತರ ವೈeನಿಕ ಪದ್ಧತಿ ಅನುಸರಿಸಿ, ಆಹಾರ ಉತ್ಪಾದನೆ ಹೆಚ್ಚಿಸಿದರು.ಆದರೆ ಇದರ ಲಾಭ ರೈತರಿಗೂ ಸಿಗುತ್ತಿಲ್ಲ, ಗ್ರಾಹಕರಿಗೂ ತಲುಪುತಿಲ್ಲ, ಮಧ್ಯವರ್ತಿಗಳು ಪಾಲಾಗುತ್ತಿದೆ ಎಂದು ವಿಷಾದಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು. ಮಣ್ಣಿನ ಸಂರಕ್ಷಣೆ ಮಾಡಬೇಕು. ರೈತರಿಗೆ ಮೂಲ ತಳಿ ನೀಡಬೇಕು. ಪೋಡಿ, ಖಾತೆಗೆ, ಸರ್ಕಾರದಿಂದ ದೊರೆಯುವ ಸವಲತ್ತು ಪಡೆಯಲು ರೈತರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸೈನಿಕರು ಹಾಗೂ ಭೂಮಿಕರ (ಅನ್ನದಾತರು) ಸಮಸ್ಯೆಗಳ ಪರಿಹಾರಕ್ಕೆ ಪತ್ರಕರ್ತರು ಸದಾ ಧ್ವನಿ ಎತ್ತಬೇಕು. ರೈತರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಬರೆದು, ಸರ್ಕಾರದ ಗಮನ ಸೆಳೆಯಬೇಕು ಎಂದು ಅವರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ದೊಡ್ಡಕಾನ್ಯದ ಡಿ.ಎಸ್. ಮಹದೇವಪ್ಪ, ನಾಗರಾಜು, ದೇವಮ್ಮಣ್ಣಿ, ಸುತ್ತೂರು ನಂಜುಂಡನಾಯಕ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಭೂಮಾಪಕರ ಸಂಘದ ಅಧ್ಯಕ್ಷ ಜಯಪ್ಪ, ಧರ್ಮಾಪುರ ನಾರಾಯಣ್, ರೈತ ಮುಖಂಡ ರಾಘವೇಂದ್ರ ಮೊದಲಾದವರು ಇದ್ದರು. ಸಮಿತಿಯ ಕಾರ್ಯದರ್ಶಿ ಬಿ.ಕೆಂಡಗಣ್ಣಸ್ವಾಮಿ, ಪ್ರಶಾಂತ್ ವಚನಗೀತೆ ಹಾಡಿದರು. ಜಾದೂಗಾರ್ ಎಸ್.ಎನ್. ಗುರುಸ್ವಾಮಿ ನಿರೂಪಿಸಿದರು. ಶಿವಪ್ರಕಾಶ್ ವಂದಿಸಿದರು.

RELATED ARTICLES
- Advertisment -
Google search engine

Most Popular