ಮೈಸೂರು: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅಲ್ಲಿನ ಬುಡಕಟ್ಟು ಸಮುದಾಯದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ರೆಸ್ಪಾನ್ಸಿಬಲ್ ಸಿಟಿಝನ್ ವಾಯ್ಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸೆಂಟ್ ಫಿಲೋಮಿನಾ ಚರ್ಚ್ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಲಿ ಎಂದು ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸಿ, ಹಿಂಸಾಚಾರದ ಬಗ್ಗೆ ಮೌನವಹಿಸಿರುವ ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಆದರೂ ಯಾಕೆ ತಡೆಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅನುಮತಿ ಪತ್ರ ತೋರಿದರು. ಈ ಸ್ಥಳದಲ್ಲಿ ಮಾಡಬೇಡಿ, ಡಿಸಿ ಕಚೇರಿಯ ಬಳಿ ಮಾಡಿ ಎಂದು ಹೇಳಿ ಅವರನ್ನು ಪೊಲೀಸರು ತಡೆದರು.
ಪ್ರತಿಭಟನೆಗೆ ಅನುಮತಿ ನೀಡಿ ಜನ ಸೇರುತ್ತಿದ್ದಂತೆ ನಿರಾಕರಣೆ ಮಾಡುವುದು ಸರಿಯಲ್ಲ. ಇಲ್ಲಿ ೫೦ ಜನ ಸೇರಿದ್ದಾರೆ. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಉಂಟು ಮಾಡುವುದಿಲ್ಲ. ಪ್ರತಿಭಟನಾಕಾರರಿಗಿಂತ ಪೊಲೀಸರೇ ಹೆಚ್ಚಾಗಿದ್ದರೂ ನಮಗೆ ನ್ಯಾಯಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡದಿರುವುದು ಸಂವಿಧಾನ ಬದ್ಧ ಹಕ್ಕಿಗೆ ಚ್ಯುತಿ ತಂದಿದೆ ಎಂದು ದೂರಿದರು.
ಈ ವೇಳೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ.ಕಾಳಚನ್ನೇಗೌಡ, ದೇಶದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗುತ್ತಿದೆ. ನಾವು ಬಹುತ್ವದ ಭಾಗವಾಗಿ ಈ ಪ್ರತಿಭಟನೆ ಮಾಡಲು ನಿಂತಿದ್ದೇವೆ. ಇದರ ವಿರುದ್ಧ ದನಿ ಎತ್ತುವ ನಾಗರಿಕರ ಸದ್ದನ್ನು ಪೊಲೀಸರು ಅಡಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರ ಈ ಧೋರಣೆ ಖಂಡನೀಯ. ರಾಜ್ಯದಲ್ಲಿ ಪ್ರತಿಭಟನೆ ನಡೆಸಲೂ ಅವಕಾಶ ಇಲ್ಲವೇ ಎಂದು ಕಿಡಿ ಕಾರಿದರು.
ಪೊಲೀಸರು ಪ್ರತಿಭಟನೆಗೆ ತಡೆಯೊಡ್ಡಿದ ಕಾರಣ ಮೂರ್ನಾಲ್ಕು ದಿನಗಳ ಒಳಗೆ ಮತ್ತೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಪ್ರೊ.ಲತಾ ಕೆ.ಬಿದ್ದಪ್ಪ, ಎಂ.ಎಫ್.ಕಲೀಂ, ಪ್ರೊ.ಪಿ.ವಿ.ನಂಜರಾಜ ಅರಸು, ಸ್ವರೂಪರಾವ್, ನಗರ ಪಾಲಿಕೆ ಮಾಜಿ ಸದಸ್ಯ ಶೌಕತ್ ಆಲಿ, ಅಬ್ದುಲ್ ರಹಮಾನ್, ಸಾ.ರಾ.ಗೋಪಾಲ್, ಆಜಂ ಪಾಷ, ಇದ್ರೀಸ್, ಘೋಷ್ ಬಾಬು, ಮಹಮ್ಮದ್ ಹನೀಫ್, ಕಲ್ಲಹಳ್ಳಿ ಕುಮಾರ್, ಬೆಟ್ಟಯ್ಯ ಕೋಟೆ, ಶಂಭುಲಿಂಗ ಸ್ವಾಮಿ, ಅಶೋಕಾಪುರಂ ವಾಸು, ಆಲನ್ ಸಂದೇಶ್, ಸಾಮುವೆಲ್, ನಿರ್ಮಲ್, ನೆಲೆ ಹಿನ್ನೆಲೆ ಗೋಪಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.