ಮೈಸೂರು: ಬೆಳಗಾವಿ ಜಿಲ್ಲೆಯ ಹಿರೇಕೋಡು ಗ್ರಾಮದಲ್ಲಿ ಜೈನ ದಿಗಂಬರ ಮುನಿ ೧೦೮ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ದಿಗಂಬರ ಜೈನ ಸಮಾಜದ ವತಿಯಿಂದ ಗಾಂಧಿ ವೃತ್ತದಲ್ಲಿ ಕೈಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.
ವಿಶ್ವದಲ್ಲಿ ಮಾನವ ಕುಲಕ್ಕೆ ಅಹಿಂಸಾ ಧರ್ಮ ಸಾರಿದ ಅತೀ ಪುರಾತನ ಧರ್ಮ ಜೈನ ಧರ್ಮ. ಯಾರನ್ನೂ ಹಿಂಸಿಸದೆ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ನಿರತವಾಗಿದೆ. ಇಂತಹ ಸಮಾಜದ ೧೦೮ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರನ್ನು ಅತ್ಯಂತ ಭೀಕರ, ಹಿಂಸಾತ್ಮಕವಾಗಿ ಕೊಲೆ ಮಾಡಿರುವುದು ಖಂಡನೀಯ. ಇದರಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಇಂತಹ ಘಟನೆಗಳು ನಾಗರಿಕ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೀಗಾಗಿ ಮುನಿಶ್ರೀಗಳನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಆಧ್ಯಾತ್ಮ ಪ್ರವರ್ತಕರೂ, ಶಾಂತಿಪ್ರಿಯರೂ, ಅಹಿಂಸಾ ಪ್ರತಿಪಾದಕರೂ ಆದ ಜೈನ ಮುನಿಗಳಿಗೆ ಇಂತಹ ಘಟನೆಗಳಿಂದ ತೊಂದರೆಯಾಗದಂತೆ ಭದ್ರತೆ ನೀಡಬೇಕು. ಭವಿಷ್ಯದಲ್ಲಿ ಯಾವುದೇ ಸಮಾಜದ ಮುನಿಗಳಿಗೂ ಈ ರೀತಿಯಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಳಿಕ ಗಾಂಧಿ ವೃತ್ತದಿಂದ ನೂತನ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಎಂ.ಆರ್.ಸುನಿಲ್‌ಕುಮಾರ್, ಕಾರ್ಯದರ್ಶಿ ಪಿಎಸ್.ಲಕ್ಷ್ಮೀಶ್ ಬಾಬು, ವಿನೋದ್ ಜೈನ್, ಸುರೇಶ್‌ಕುಮಾರ್ ಜೈನ್, ಯುವರಾಜ್ ಭಂಡಾರಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.