ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಗುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಾಗಿಲು ತೆರೆಯದಿರುವುದನ್ನು ಖಂಡಿಸಿ ಹಾಗೂ ಸಂಘದ ಕಾರ್ಯದರ್ಶಿ ರಾಜೇಶ್ ಅವರ ಕಾರ್ಯ ವೈಖರಿಯ ವಿರುದ್ಧ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರುಗಳು ಸಂಘದ ಮುಂದೆ ಪ್ರತಿಭಟನೆ ಮಾಡಿದ ಘಟನೆಯ ಮಂಗಳವಾರ ನಡೆಯಿತು.
ಸಂಘದ ಕಾರ್ಯದರ್ಶಿ ರಾಜೇಶ್ ಎಂಬುವರು ಸಂಘಕ್ಕೆ ಸಂಬಂಧಿಸಿದಂತಹ ಲೆಕ್ಕಪತ್ರಗಳನ್ನು ಸರಿಯಾಗಿ ಮಾಡಿಲ್ಲ, ಸಂಘದ ಹಲವು ದಾಖಲೆಗಳಿಗೆ ಸಂಘದ ಆಡಳಿತ ಮಂಡಳಿಯವರ ಸಹಿಗಳನ್ನು ತಾವೇ ಮಾಡಿಕೊಂಡು ಪೋರ್ಜರಿ ಮಾಡಿರುತ್ತಾರೆ ಹಾಗೂ ಸಂಘದ ಯಾವುದೇ ದಾಖಲೆಗಳನ್ನು ಸಂಘದ ಕಟ್ಟಡದಲ್ಲಿ ಇಡದೆ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಎಲ್ಲಾ ಘಟನೆಗಳ ಸಂಬಂಧ ಸಂಘದಲ್ಲಿ ಸಭೆಯನ್ನು ಮಾಡಿದಾಗ ಆಡಳಿತ ಮಂಡಳಿಯವರ ಸಹಿಯನ್ನು ನಾನೇ ಮಾಡಿರುತ್ತೇನೆಂದು ಕಾರ್ಯದರ್ಶಿ ರಾಜೇಶ್ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಕಾರ್ಯದರ್ಶಿ ರಾಜೇಶ್ ಗೆ ಈಗಾಗಲೇ ನೋಟಿಸ್ ಕೂಡ ನೀಡಲಾಗಿದೆ. ಈ ಎಲ್ಲಾ ಘಟನೆಗಳ ಬಗ್ಗೆ ಮೈಮುಲ್ ನ ಮಾರ್ಗ ವಿಸ್ತರಣಾಧಿಕಾರಿಗೆ ಹಾಲು ಉತ್ಪಾದಕರುಗಳು ಹಾಗೂ ಗ್ರಾಮಸ್ಥರುಗಳು ಮಾಹಿತಿಯನ್ನು ನೀಡಿದರು ಕೂಡ ಯಾವುದೇ ಅಗತ್ಯ ಕ್ರಮ ವಹಿಸದೆ ನಿರ್ಲಕ್ಷ ತೋರಿದ್ದಾರೆಂದು ದೂರಿದರು.
ಮೈಮುಲ್ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಗುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಕ್ರಮಗಳ ಬಗ್ಗೆ ತನಿಖೆ ಮಾಡಿ ಸಂಘವನ್ನು ಉಳಿಸಬೇಕೆಂದು ಒತ್ತಾಯಿಸಿದರು.
ಮಂಗಳವಾರ ಸಂಘದ ಬಾಗಿಲನ್ನು ತೆರೆಯದ ಕಾರಣ ಹಾಲು ಉತ್ಪಾದಕರುಗಳು ತಾವು ತಂದಿದ್ದ ಹಾಲನ್ನು ಮರಳಿ ಮನೆಗೆ ತೆಗೆದುಕೊಂಡು ಹೋದ ಘಟನೆಯು ನಡೆಯಿತು. ಇದರಿಂದ ಹಾಲು ಉತ್ಪಾದಕರುಗಳಿಗೆ ಅನ್ಯಾಯವಾಗುತ್ತಿದೆ. ಸಂಘವನ್ನೇ ನಂಬಿ ಹೈನುಗಾರಿಕೆ ನಡೆಸುತ್ತಿರುವ ರೈತರು ಸಂಘಕ್ಕೆ ಹಾಲು ಹಾಕಲಾಗದೆ ಬೇರೆ ಕಡೆಗೆ ಮಾರಲೂ ಆಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಕೀರ್ತಿ, ನಿರ್ದೇಶಕರಾದ ಕುಮಾರ, ಚಿಕ್ಕೇಗೌಡ, ಶಿವಣ್ಣ, ಪಿ.ಕುಮಾರ್, ಶ್ರೀನಿವಾಸ್, ಪಲ್ಲವಿಹರೀಶ್, ಗ್ರಾಮ ಪಂಚಾಯತಿ ಸದಸ್ಯ ಷಣ್ಮುಖ, ಮುಖಂಡರುಗಳಾದ ಸುರೇಶ, ರಾಮೇಗೌಡ, ಗೋವಿಂದಶೆಟ್ಟಿ, ನಾಗೇಗೌಡ, ರೇವಣ್ಣ, ರಾಜೇಗೌಡ, ಪುಟ್ಟೇಗೌಡ, ರಾಜಶೇಖರ, ಚಿಕ್ಕೇಗೌಡ, ರಮೇಶ್, ಪಟೇಲ್, ಮಂಜೇಗೌಡ, ಸದಾಶಿವ, ಸತೀಶ್, ಪುಟ್ಟಪ್ಪಾಜಿ, ಗಣೇಶ್, ನಂದೀಶ್, ದೇವರಾಜು, ಹರೀಶ್, ನಾಗರಾಜು, ಕುಳ್ಳೇಗೌಡ, ದೊಡ್ಡಸ್ವಾಮಿ, ಪವನ್ ಸೇರಿದಂತೆ ಹಲವರು ಇದ್ದರು.