Thursday, October 9, 2025
Google search engine

Homeರಾಜ್ಯಸುದ್ದಿಜಾಲಬೀಡಿ ಡಿಪೋ ಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಬೀಡಿ ಡಿಪೋ ಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಮಂಗಳೂರು (ದಕ್ಷಿಣ ಕನ್ನಡ) 2018 ರಿಂದ 2024 ರ ವರೆಗಿನ ಬಾಕಿ ಉಳಿಸಿರುವ ಕನಿಷ್ಟ ವೇತನ, 2024 ರಲ್ಲಿ ಹೆಚ್ಚಳಗೊಂಡಿರುವ ತುಟ್ಟಿಭತ್ಯೆ ಪಾವತಿಗೆ ಒತ್ತಾಯಿಸಿ “ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ” ಆಶ್ರಯದಲ್ಲಿ ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ, ಗುರುಪುರ, ಸುರತ್ಕಲ್ ಬೀಡಿ ಲೇಬರ್ ಯೂನಿಯನ್, ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘ ಜಂಟಿಯಾಗಿ ಮಂಗಳೂರಿನ ಕೈಕಂಬದಲ್ಲಿರುವ ಟೆಲಿಫೋನ್ ಬೀಡಿ ಡಿಪೋ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು. ಮುತ್ತಿಗೆ ಪ್ರತಿಭಟನೆ ಸುಮಾರು ಮೂರು ತಾಸು ಮುಂದುವರಿಯಿತು. ಐನೂರಕ್ಕೂ ಹೆಚ್ಚು ಮಹಿಳಾ ಬೀಡಿ ಕಾರ್ಮಿಕರು ಉರಿ ಬಿಸಿಲನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಭಾಗವಹಿಸಿದರು.

2018 ರಲ್ಲಿ ತ್ರಿಪಕ್ಷೀಯ ಮಾತುಕತೆಯ ಆಧಾರದಲ್ಲಿ ಸರಕಾರ ನಲವತ್ತು ರೂಪಾಯಿ ಹೆಚ್ಚಿಸಿ ಕನಿಷ್ಟ ಕೂಲಿ ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಮಾಲಕರು ಈ ಆದೇಶವನ್ನು ಜಾರಿಗೊಳಿಸದೆ ಕಾರ್ಮಿಕರನ್ನು ವಂಚಿಸುತ್ತಾ ಬಂದಿದ್ದಾರೆ. ಆ ತರುವಾಯ 2024 ರಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಲಕರ ಪರವಾಗಿ ಹಿಮ್ಮುಖವಾಗಿ ನಿಗದಿಗೊಳಿಸಿ ಕನಿಷ್ಟ ಕೂಲಿ ಕಡಿತಗೊಳಿಸಿ ಏಕಪಕ್ಷೀಯಾಗಿ ಆದೇಶ ಹೊರಡಿಸಲಾಯಿತು.

ಮಾಲಕರ ಪರವಾಗಿ ಹಿಮ್ಮುಖವಾಗಿ ಹೊರಡಿಸಲಾದ ಆದೇಶವನ್ನೂ ಜಾರಿಗೊಳಿಸದೆ ಬೀಡಿ ಮಾಲಕರು ಕಾರ್ಮಿಕರ ಬಾಕಿ ವೇತನ ಪಾವತಿಸದಿರುವುದನ್ನು ಹೊರಡಿಸಿ ಈಗ ಬೀಡಿ ಮಜೂರರ ಸಂಘಗಳು ಹೋರಾಟವನ್ನು ತೀವ್ರಗೊಳಿಸಿದ್ದು, ಜಿಲ್ಲೆಯಾದ್ಯಂತ ಮಾಲಕರ ಡಿಪೋಗಳ ಮುಂಭಾಗ ಸರಣಿಯಾಗಿ ಪ್ರತಿಭಟನೆ, ಮುತ್ತಿಗೆ ಹೋರಾಟ ನಡೆಸುತ್ತಿವೆ ಇಂದು ಕೈಕಂಬ, ಗುರುಪುರ, ವಾಮಂಜೂರು, ಕುಪ್ಪೆಪದವು ಪ್ರದೇಶದ ಬೀಡಿ ಕಾರ್ಮಿಕರ ಸಂಘಗಳು ಪ್ರತಿಭಟನೆ ನಡೆಸಿದವು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ವಸಂತ ಆಚಾರಿ, ಬಿ ಶೇಖರ್, ಮುನೀರ್ ಕಾಟಿಪಳ್ಳ, ಬಾಲಕೃಷ್ಣ ಶೆಟ್ಟಿ, ಸದಾಶಿವ ದಾಸ್, ಸೀತಾರಾಮ ಬೇರಿಂಜೆ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯ ಬೀಡಿ ಮಜೂರರ ಸಂಘದ ಪದಾಧಿಕಾರಿಗಳಾದ ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಯಶೋಧ ಮಳಲಿ, ಭವಾನಿ ವಾಮಂಜೂರು, ಹೊನ್ನಯ್ಯ ಅಮೀನ್ ವಾಮಂಜೂರು, ಕುಸುಮ ಕುಪ್ಪೆಪದವು, ವಾರಿಜ ಕುಪ್ಪೆಪದವು, ಅಶೋಕ ವಾಮಂಜೂರು ಮತ್ತಿತರರು ವಹಿಸಿದ್ದರು. ನೋಣಯ್ಯ ಗೌಡ ಸ್ವಾಗತಿಸಿ, ವಸಂತಿ ಕುಪ್ಪೆಪದವು ವಂದಿಸಿದರು.

RELATED ARTICLES
- Advertisment -
Google search engine

Most Popular