ಮೈಸೂರು: ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ರಾಜ್ಯದ ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾಂಗ್ರೆಸ್ ಸರ್ಕಾರ ಕಳೆದ ವರ್ಷ, ಅಧಿಕಾರಕ್ಕೆ ಬರುವ ಮುಂಚೆ ರಾಜ್ಯ ಬಿಜೆಪಿ ಸರ್ಕಾರವು ಜನ ವಿರೋಧಿ ಸರ್ಕಾರ, ದಿನೇ ದಿನೇ ಬೆಲೆ ಏರಿಕೆ ಮಾಡುತ್ತಿದೆ ಎಂದು ಜನರಿಗೆ ಹೇಳಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಬೆಲೆಗಳನ್ನು ಇಳಿಸುತ್ತೇವೆ ಹಾಗೂ ಉಚಿತ ಐದು ಭಾಗ್ಯಗಳನ್ನು ನೀಡುತ್ತೇವೆ ಎಂದು ರಾಜ್ಯದ ಜನತೆಗೆ ಆಮಿಷ ಒಡ್ಡಿ, ತದನಂತರ ಗೆದ್ದು ಅಧಿಕಾರಕ್ಕೆ ಬಂದ ತಕ್ಷಣವೇ ಉಚಿತ ಭಾಗ್ಯಗಳಿಗೋಸ್ಕರ ಮೊದಲು ವಿದ್ಯುತ್ ದರ ಹೆಚ್ಚಳ, ಕೆಎಸ್ಆರ್ಟಿಸಿ ಬಸ್ ದರ ಹೆಚ್ಚಳ, ಆಹಾರ ಧಾನ್ಯಗಳ ಬೆಲೆ ಹೆಚ್ಚಳ, ಹಾಲಿನ ದರ ಹೆಚ್ಚಳ, ಮನೆಗಳ ರಿಜಿಸ್ಟ್ರೇಷನ್ ಸ್ಟಾಂಪ್ ಡ್ಯೂಟಿ ದರ ಹೆಚ್ಚಳ, ಮಧ್ಯದ ಬೆಲೆಗಳ ಹೆಚ್ಚಳ, ಜೊತೆಗೆ ಕನಿಷ್ಠ 20 ರೂಪಾಯಿ ಇದ್ದ ಸ್ಟ್ಯಾಂಪ್ ಪೇಪರನ್ನು 100 ರೂ. ಗೆ ಹೆಚ್ಚಳ ಮಾಡಿ, ರಾಜ್ಯದಲ್ಲಿರುವ ಎಲ್ಲಾ ವಸ್ತುಗಳ ಬೆಲೆಗಳನ್ನೆಲ್ಲ ಏರಿಸಿ ಈಗ ಪುನಃ ಸಾಲದೆಂಬಂತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಅತ್ಯಂತ ಖಂಡನೀಯ.
ಸರ್ಕಾರ ಜನರಿಗೆ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಕಾಂಗ್ರೆಸ್ ನ ಉಚಿತ ಭಾಗ್ಯಗಳಿಂದ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ. ರಾಜ್ಯದಲ್ಲಿ ತರಕಾರಿ ಬೆಲೆಯು ಸಹ ಬಹಳ ಹೆಚ್ಚಿದೆ. ಅತೀ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಬೇಕಾದ ರಾಜ್ಯ ಸರ್ಕಾರ ಪದೇ ಪದೇ ಬೆಲೆ ಏರಿಕೆಗಳನ್ನು ಮಾಡಿ ರಾಜ್ಯದ ಜನತೆಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
ರಾಜ್ಯ ಸರ್ಕಾರ ಕಳೆದ ಒಂದು ವರ್ಷಗಳಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಈಗ ಎಲ್ಲಾ ಬಿಟ್ಟಿ ಭಾಗ್ಯಗಳನ್ನು ಲೋಕಸಭಾ ಚುನಾವಣೆಯ ನಂತರ ನಿಲ್ಲಿಸುವ ಆಲೋಚನೆಯಲ್ಲಿತ್ತು. ಆದರೆ ಈಗ ಇನ್ನೇನು ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆ ನಡೆಯುವುದರಿಂದ ಬಿಟ್ಟಿ ಭಾಗ್ಯಗಳನ್ನು ಇನ್ನೂ ಜೀವಂತವಾಗಿಟ್ಟುಕೊಳ್ಳಲು ರಾಜ್ಯದ ಜನರಿಗೆ ಅತೀ ಅಗತ್ಯವಾಗಿರುವ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.
ಆದ್ದರಿಂದ ರಾಜ್ಯ ಸರ್ಕಾರ ಈ ಕೂಡಲೇ ಬೆಲೆ ಏರಿಕೆಗಳನ್ನು ನಿಯಂತ್ರಣ ಮಾಡಿ ಈ ಕೂಡಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತೀದ್ದೇವೆ.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ, ಪ್ರಭುಶಂಕರ್ ಎಂ ಬಿ, ಕೃಷ್ಣಯ್ಯ, ಸುರೇಶ್ ಗೋಲ್ಡ್, ಡಾ. ಶಾಂತ ರಾಜೇ ಅರಸ್, ಶಿವಲಿಂಗಯ್ಯ, ನೇಹ ,ನಾರಾಯಣ ಗೌಡ, ಲಕ್ಷ್ಮಿ, ಭಾಗ್ಯಮ್ಮ , ಸುನಿಲ್ ಅಗರ್ವಾಲ್, ಪರಿಸರ ಚಂದ್ರು, ದರ್ಶನ್ ಗೌಡ, ಹನುಮಂತಯ್ಯ, ರಾಧಾಕೃಷ್ಣ, ರಘುರಾಜ್ ಅರಸು ,ಆನಂದ್, ಸ್ವಾಮಿ ಗೌಡ, ಗಣೇಶ ಪ್ರಸಾದ್, ರಾಮಕೃಷ್ಣ ಗೌಡ, ರವೀಶ್, ಪ್ರಭಾಕರ, ಮಹಾದೇವ ಸ್ವಾಮಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.