ಮಂಡ್ಯ: ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ಖಂಡಿಸಿ, ಮಣಿಪುರ ಸರ್ಕಾರದ ವಜಾಕ್ಕೆ ಆಗ್ರಹಿಸಿ ಮಂಡ್ಯದಲ್ಲಿ ಮಂಡ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ಮಂಡ್ಯದ ಡಿಸಿ ಕಚೇರಿಯ ಕಾವೇರಿವನದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆ ಬಳಿ ಧರಣಿ ಕುಳಿತ ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಖಂಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಮಣಿಪುರ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹಿಸಿದರು.
ಮಣಿಪುರದಲ್ಲಿ ಜನಾಂಗದ ನಡುವೆ ದ್ವೇಷ ನಡೆಯುತ್ತಿದೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿರುವ ರೀತಿ ಸರಿಯಲ್ಲ. ಇದು ಮನುಷ್ಯ ಕುಲಕ್ಕೆ ಅವಮಾನ. ಶಾಂತಿ ಸುವ್ಯವಸ್ಥೆ ಕಾಪಾಡದ ಮಣಿಪುರ ಸಿಎಂ ವಜಾ ಹಾಗಬೇಕು. ರಾಷ್ಟ್ರಪತಿ ಆಡಳಿತ ಬರಬೇಕು. ಆರೋಪಿಗಳಿಗೆ ಗಲ್ಲಿಗೇರಿಸಿ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಕಾಣದ ಕೈಗಳು ಈ ಕೃತ್ಯ ಮಾಡ್ತಿದೆ. ಪ್ರಕರಣ ತನಿಖೆಯಾಗಿ, ಸತ್ಯ ಹೊರಗೆ ಬರಬೇಕು. ನಿರಂತರವಾಗಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದಾರೆ. ತಕ್ಷಣವೇ ಶಾಂತಿ ಕಾಪಾಡಿ ನೊಂದ ಜನರಿಗೆ ನ್ಯಾಯಕೊಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಸೇರಿ ಕಾರ್ಯಕರ್ತರು ಭಾಗಿಯಾಗಿದ್ದರು.