- ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬೆಂಗಳೂರಿನಲ್ಲಿ ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿಯವರ ಪ್ರತಿಮೆ ವಿರೂಪಗೊಳಿಸಿರುವ ಘಟನೆ ಖಂಡಿಸಿ ಸಾಲಿಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಡಾ.ಶಿವಕುಮಾರಸ್ವಾಮೀಜಿಯವರ ಭಕ್ತರ ಬಳಗ ಹಾಗು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ನೂರಾರು ಮಂದಿ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಶ್ರೀ ಶಿವಕುಮಾರಸ್ವಾಮೀಜಿ ಭಕ್ತರ ಬಳಗದ ಅಧ್ಯಕ್ಷರೂ ಆದ,ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿ, ಮಹಾ ಮಾನವತಾವಾದಿ, ಎಲ್ಲಾ ಧರ್ಮ,ಹಾಗು ಸರ್ವ ಜನಾಂಗದ ಏಳಿಗೆಗೆ ತ್ರಿವಿಧ ದಾಸೋಹದ ಮೂಲಕ ಶ್ರಮಿಸಿ ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ನೆಲೆಯೂರಿರುವ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರ ಪ್ರತಿಮೆಗೆ ಬೆಂಗಳೂರಿನ ವೀರಭದ್ರ ನಗರದಲ್ಲಿ ಕಿಡಿಗೇಡಿಯೊಬ್ಬ ಹಾನಿಮಾಡಿದ್ದು,ನಾಡಿನ ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ತಪ್ಪಿತಸ್ಥನ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ ಪ್ರತಿಭಟನಾಕಾರರು, ಮರುಕಳಿಸಿದರೆ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಾಡ್ಯ ಮಠದ ಬಸವರಾಜ ಸ್ವಾಮೀಜಿ, ಮುಖಂಡರಾದ ಕೆಂಪರಾಜು, ಹಾಡ್ಯಕುಮಾರ್, ದಡದಹಳ್ಳಿ ನಟರಾಜ್, ಕರ್ತಾಳು ಎಸ್.ಮಧು, ಲಾಳನಹಳ್ಳಿಮಹೇಶ್, ನಾಗೇಶ್, ಪಶುಪತಿ ತೇಜೋಮೂರ್ತಿ,ಕರ್ತಾಳು ಪರಮೇಶ್, ಕರ್ತಾಳು ನಟರಾಜ್, ಭೇರ್ಯ ಪ್ರಕಾಶ್, ಎಲೆಮುದ್ದನಹಳ್ಳಿ ಲಿಂಗಪ್ಪ, ಅಂಕನಹಳ್ಳಿ ಯತೀಶ್, ತಂದ್ರೆ ಅಂಕನಹಳ್ಳಿ ಬಸವರಾಜ್, ತ್ರಿಜೇಂದ್ರ,ಸರಗೂರು ಶಿವು, ದೇವಿತಂದ್ರೆ ಮೂರ್ತಿ ಸೇರಿದಂತೆ ಸಮಾಜದ ಹಲವು ಮುಖಂಡರು ಇದ್ದರು.