Saturday, April 19, 2025
Google search engine

Homeರಾಜ್ಯಸುದ್ದಿಜಾಲಅರಿಶಿಣ ಹಣ ಜಮೆ ಮಾಡಲು ವಿಳಂಬ ಖಂಡಿಸಿ ಪ್ರತಿಭಟನೆ: ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆ ಎಚ್ಚರಿಕೆ

ಅರಿಶಿಣ ಹಣ ಜಮೆ ಮಾಡಲು ವಿಳಂಬ ಖಂಡಿಸಿ ಪ್ರತಿಭಟನೆ: ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆ ಎಚ್ಚರಿಕೆ

ಗುಂಡ್ಲುಪೇಟೆ: ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ್ದ ಅರಿಶಿಣ ಹಣ ರೈತರ ಖಾತೆಗೆ ಜಮೆ ಮಾಡಲು ವಿಳಂಬ ಧೋರಣೆ ಅನುಸರಿಸಿದ ಕ್ರಮ ಖಂಡಿಸಿ ಹಾಗೂ ಅರಿಶಿಣ ವಾಪಸ್ ಕೊಡುವಂತೆ ಆಗ್ರಹಿಸಿ ರೈತರು ನೀರಿನ ಓವರ್ ಹೆಡ್ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ  ಘಟನೆ ಪಟ್ಟಣದ ಹೊರ ವಲಯದ ಎಪಿಎಂಸಿ ಉಗ್ರಾಣ ಬಳಿಯಲ್ಲಿ ಬುಧವಾರ ನಡೆದಿದೆ.

ಪಟ್ಟಣದ ಹೊರ ವಲಯದ ಉಗ್ರಾಣದ ಬಳಿಯಲ್ಲಿ ಕಳೆದ ಎರಡು ದಿನಗಳಿಂದ ರೈತ ಮುಖಂಡರು ಅಹೋರಾತ್ರಿ ಧರಣಿ ನಡೆಸಿ, ಖರೀದಿ ಕೇಂದ್ರದ ಮೂಲಕ ಖರೀದಿ ಮಾಡಿದ್ದ ಅರಿಶಿಣದ ಹಣವನ್ನು ರೈತರ ಖಾತೆಗೆ ಜಮೆ ಮಾಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಮಣಿದ ಅಧಿಕಾರಿಗಳು ಮಂಗಳವಾರ ಸಂಜೆ ರೈತರ ಖಾತೆಗೆ ಹಣ ಜಮೆ ಮಾಡಿದ್ದರು. ಆದರೂ ಸಹ ಧರಣಿ ನಿರತರು ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆ ಆಲಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಬುಧವಾರ ಮಧ್ಯಾಹ್ನವಾದರು ಜಿಲ್ಲಾಧಿಕಾರಿಗಳು ಆಗಮಿಸದ ಹಿನ್ನೆಲೆ ಆಕ್ರೋಶಗೊಂಡ ಧರಣಿ ನಿರತ ರೈತರಾದ ಕಂದೇಗಾಲ ಮಾದಪ್ಪ ಹಾಗೂ ಶ್ಯಾನಡ್ರಹಳ್ಳಿ ಬಸವರಾಜು ಎಂಬುವವರು ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಮೇಲೆರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನಂತರ ಕೆಳಗಿಳಿಯಿರಿ ಏನೇ ಸಮಸ್ಯೆ ಇದ್ದರೂ ನಾವು ಬಗೆಹರಿಸುತ್ತೇವೆ ಎಂದು ರೈತ ಸಂಘಟನೆಯವರು, ಅರಿಶಿಣ ಬೆಳೆಗಾರರ ಒಕ್ಕೂಟದವರು ಮನವೊಲಿಸುವ ಪ್ರಯತ್ನ ನಡೆಸಿದರೂ ಅವರು ಒಪ್ಪಲಿಲ್ಲ.

ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ನಮ್ಮ ಅರಿಶಿಣ ವಾಪಸ್ಸು ಕೊಡುವಂತೆ ಆಗ್ರಹಿಸಿ ಪ್ರತಿಭಟನಾ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಓವರ್ ಹೆಡ್ ಟ್ಯಾಂಕ್ ಏರಿರುವುದು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜ್, ಅಗ್ನಿಶಾಮಕ ದಳ ಅಧಿಕಾರಿ ಸಿದ್ದೇಗೌಡ ಟ್ಯಾಂಕ್ ಬಳಿ ಹೋದಾಗಲೂ ಬೇಡಿಕೆ ಈಡೇರಿಸದೇ ನಮ್ಮನ್ನು ಇಳಿಸುವ ಪ್ರಯತ್ನ ಮಾಡಬೇಡಿ. ನೀವು ಮುಂದಾದರೆ ಹೊರಗೆ ಕೆಳಗೆ ಜಿಗಿಯುತ್ತೇವೆ. ಇಲ್ಲಾ ಟ್ಯಾಂಕ್ ತುಂಬಿದ್ದು, ನೀರಿಗೆ ಜಿಗಿಯುತ್ತೇವೆ ಎನ್ನುತ್ತಿದ್ದರು. ಇದರಿಂದ ಆತಂಕ ಮುಂದುವರೆದಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲುಪಡೆ, ತುರ್ತು ಚಿಕಿತ್ಸಾ ವಾಹನ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ಮತ್ತು ನೌಕರರು ಬೀಡು ಬಿಟ್ಟಿದ್ದರು.

ಪ್ರತಿಭಟನಾನಿರತರ ಬೇಡಿಕೆ ಹಿನ್ನೆಲೆಯಲ್ಲಿ ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್, ಎಡಿಸಿ ಗೀತಾ ಹುಡೇದ ಪ್ರತಿಭಟನಾನಿರತರ ಮನವಿ ಆಲಿಸಿದರು. ಕೃಷಿ ಮಾರುಕಟ್ಟೆ ಇಲಾಖೆ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿ ಮೂರು ದಿನದಲ್ಲಿ ಅರಿಶಿಣ ವಾಪಸ್ಸು ಕೊಡಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಖರೀದಿಸಿ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿರುವ ಅರಿಶಿಣ ಎತ್ತುವಳಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು. ನಂತರ ಟ್ಯಾಂಕ್  ಏರಿದ್ದವರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಕೆಳಗಿಳಿದರು. ಶಾಸಕರು ಮತ್ತು ಉಪವಿಭಾಗಾಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ರೈತ ಸಂಘಟನೆ ಮತ್ತು ಅರಿಶಿಣ ಬೆಳೆಗಾರರ ಒಕ್ಕೂಟದವರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

ಈ ವೇಳೆ ತಹಶೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ, ರೈತ ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಅರಿಶಿಣ ಬೆಳೆಗಾರರ ರಾಜ್ಯ ಸಂಘಟನೆ ಸಂಚಾಲಕ ನಾಗಾರ್ಜುನ್, ಜಿ.ಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಪ್ರಸಾದ್, ರೈತ ಸಂಘಟನೆ ಮುಖಂಡರಾದ ಕುಂದಕೆರೆ ಸಂಪತ್ತು, ಮಂಗಳಸಂಪತ್ತು, ದಡದಹಳ್ಳಿ ಮಹೇಶ್, ರಾಜಪ್ಪ, ಕಂದೇಗಾಲ ಮಾದಪ್ಪ, ಮಹೇಂದ್ರ, ವಿನೋದ್, ನಾಗೇಂದ್ರ, ಮಾದಪ್ಪ, ನಂಜಪ್ಪ, ರಾಜು, ಶಿವಕುಮಾರ್, ಶಿವಣ್ಣ, ಉಪ ತಹಸೀಲ್ದಾರ್ ಜಯಪ್ರಕಾಶ್, ಶಿರಸ್ತೇದಾರ್ ಮಹೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ವಿಜಯಲಕ್ಷ್ಮಿ, ಜವರೇಗೌಡ  ಹಾಜರಿದ್ದರು.

RELATED ARTICLES
- Advertisment -
Google search engine

Most Popular