ಮಂಡ್ಯ: ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿಗಾಗಿ ಸುಗ್ರೀವಾಜ್ಞೆಗೆ ಆಗ್ರಹಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಡಿಸಿ ಕಚೇರಿವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿಗಾಗಿ ಸುದೀರ್ಘ ಹೋರಾಟ ನಡೆಸಿದರು. ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು ಒಳ ಮೀಸಲು ಜಾರಿಗೆ ಇಚ್ಛಾಸಕ್ತಿ ತೋರಲಿಲ್ಲ. ಇದೀಗ ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿ ಜಾರಿಗೆ ಸಮ್ಮತಿಸಿರುವುದು ಸ್ವಾಗತಾರ್ಹ.
ಎಚ್ ಕಾಂತರಾಜು ವರದಿ ಆಧರಿಸಿ ಪರಿಶಿಷ್ಟರ ಮೀಸಲು ನೀತಿ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಬೇಕು. ಶಾಸಕ ಚೆನ್ನಾ ರೆಡ್ಡಿ ಮತ್ತು ಅವನ ಮಗ ಸೊನ್ನಿ ಗೌಡರ ಲಂಚ ಬಾಕತನಕ್ಕೆ, ಪೋಲಿಸ್ ಸಬ್ ಇನ್ ಸ್ಪೆಕ್ಟರ್ ಪರಶುರಾಮ್ ಛಲವಾದಿ ಬಲಿಯಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು.
30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಿಗಳನ್ನು ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಲಾಯಿತು. ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.