ಮೈಸೂರು: ಮೈಸೂರು ವಿವಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಮಾನಸ ಗಂಗೋತ್ರಿಯಲ್ಲಿ ಬುಧವಾರ ಪ್ರತಿಭಟಿಸಿದರು.
ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ. ಕಳೆದ ೩ ವರ್ಷಗಳಿಂದ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದು, ಹಲವು ಬಾರಿ ಮನವಿ ಹಾಗೂ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ವಿದ್ಯಾರ್ಥಿಗಳು ಕೇಳುವಂತಹ ಕನಿಷ್ಠ ಸೌಲಭ್ಯ ನೀಡುವಲ್ಲಿ ವಿವಿ ವಿಫಲವಾಗಿದೆ. ಇತ್ತೀಚೆಗೆ ಕುಲಪತಿ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದರಿಂದ ಆಡಳಿತ ವರ್ಗ ಯಾವುದೇ ಕೆಲಸ ನಿರ್ವಹಿಸುತ್ತಿಲ್ಲ ಎಂದು ಕಿಡಿ ಕಾರಿದರು.
ಕಾಮಗಾರಿಯಲ್ಲಿ ಕಳಪೆ ಗುಣಮಟ್ಟವಿದೆ. ರಸ್ತೆಗಳಲ್ಲಿ ಬೀದಿ ದೀಪದ ಕೊರತೆ ಇದೆ. ರಾತ್ರಿ ವೇಳೆ ಮೊಬೈಲ್ ಟಾರ್ಚ್ ಬಳಸಿ ಓಡಾಡುವಂತಾಗಿದೆ. ಮೈಸೂರು ವಿವಿಯಲ್ಲಿ ಹಣ ಇಲ್ಲ ಎಂಬ ಸಬೂಬು ನೀಡಿ ಸುಮ್ಮನಾಗುತ್ತಿದ್ದಾರೆ. ಸಹಾಯಕ ವಾರ್ಡನ್‌ಗಳನ್ನು ನೇಮಿಸಿ ೫ ಸಾವಿರ ಗೌರವಧನ ನೀಡಲಾಗುತ್ತಿದೆ. ಆಹಾರ ಪೂರೈಕೆಯಲ್ಲಿ ತರಕಾರಿ ಕೊರತೆ ಇದ್ದು, ಪ್ರತಿನಿತ್ಯ ಆಹಾರ ಪೂರೈಸುತ್ತಿಲ್ಲ ಎಂದು ಅವರು ದೂರಿದರು.
ಹೀಗಾಗಿ ಹಾಸ್ಟೆಲ್‌ನಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು, ಕುಲಪತಿಗಳ ನೇಮಕಾತಿ ಮತ್ತು ಸಹಾಯಕ ವಾರ್ಡ್‌ನಗಳ ಬದಲಾವಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿ.ಆರ್.ಪರಂಜ್ಯೋತಿ, ಗೌತಮ್ ಮೌರ್ಯ, ಎಸ್.ಚೇತನ್, ಬಿ.ಆರ್.ಪ್ರವೀಣ್, ಕಿರಣ್ ಮೌರ್ಯ, ಕಾಂತರಾಜು, ರೋಹನ್, ಹೃತಿಕ್ ಮೊದಲಾದವರು ಇದ್ದರು.