Sunday, April 20, 2025
Google search engine

Homeಸ್ಥಳೀಯಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಪ್ರತಿಭಟನೆ


ಮೈಸೂರು: ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಜು.೧೭ರಂದು ನಗರದ ನಂಜರಾಜ ಬಹದ್ದೂರ್ ಛತ್ರದಿಂದ ಗಾಂಧಿವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನಿ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಒಡನಾಡಿ ಸೇವಾ ಸಂಸ್ಥೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವಂತೆ ಜನರಲ್ಲಿ ಹೇಗೆ ಜಾಗೃತಿ ಮೂಡಿಸಬೇಕು ಎಂಬ ವಿಚಾರವಾಗಿ ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಅದರ ಭಾಗವಾಗಿ ಈ ಪ್ರತಿಭಟನಾ ಮೆರವಣಿಗೆಯನ್ನು ಹಲವಾರು ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ಹತ್ಯಾಚಾರಗಳು ಮತ್ತೆ ಮರುಕಳಿಸದಂತೆ ತಡೆಯಲು ಈ ಹೋರಾಟ ಅತ್ಯವಶ್ಯಕ ಎಂದು ಹೇಳಿದರು.
ಎಂ.ಎಲ್.ಪರಶುರಾಂ ಮಾತನಾಡಿ, ಸೌಜನ್ಯಳನ್ನು ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಅಪರಾಧಿ ಎಂದು ಸುಳ್ಳು ಪ್ರಕರಣ ದಾಖಲಿಸಿ ಆರೂವರೆ ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಆದರೆ, ಸಿಬಿಐ ಕೋರ್ಟ್ ಆತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಅಲ್ಲದೇ ಅಧಿಕಾರಿಗಳು ಕೊಟ್ಟಿರುವ ಸಾಕ್ಷಿಗಳು ಹಾಗೂ ವೈದ್ಯರು ನೀಡಿರುವ ಡಿಎನ್‌ಎ ವರದಿಗಳು ಹೋಲಿಕೆಯಾಗುತ್ತಿಲ್ಲ ಎಂದು ಹೇಳಿದ್ದು, ನೈಜ ಆರೋಪಿಗಳ ತನಿಖೆ ಮಾಡುವಂತೆ ಆದೇಶವನ್ನೂ ನೀಡಿದೆ. ಅದರಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಧರ್ಮಸ್ಥದಲ್ಲಿ ಸೌಜನ್ಯ ಪ್ರಕರಣದಂತಹ ನೂರಾರು ಕೊಲೆ, ಅತ್ಯಾಚಾರಗಳು ನಡೆದು ಬೆಳಕಿಗೆ ಬಾರದೆ ಕತ್ತಲೆಯಲ್ಲೇ ಕರಗಿ ಹೋಗಿವೆ. ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ರಾಜ್ಯದ ಜನರು ತಲೆ ತಗ್ಗಿಸುವಂತ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದಂತೆ, ಪದ್ಮ, ನೇತ್ರಾವತಿಯಂತಹ ನೂರಾರು ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗ, ಈ ನಕಲಿ ಹಿಂದುತ್ವವಾದಿಗಳಾದ ಬಜರಂಗದಳ, ವಿಶ್ವಹಿಂದೂ ಪರಿಷತ್, ಆರ್‌ಎಸ್‌ಎಸ್ ಸಂಘಟನೆಗಳು ಇಂತಹ ದೌರ್ಜನ್ಯಗಳ ವಿರುದ್ಧ ಧನಿ ಎತ್ತಲೇ ಇಲ್ಲ. ಇವರೆಲ್ಲ ಬಾಡಿಗೆ ಹೋರಾಟಗಾರರು ಎಂದು ಮಹೇಶ್ ಶೆಟ್ಟಿ ಆರೋಪಿಸಿದರು.
ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ, ನೈಜ ಅಪರಾಧಗಳಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಮೈಸೂರು, ಕೊಡಗು, ದಕ್ಷಿಣ ಕನ್ನಡ ಎಲ್ಲಾ ಜಿಲ್ಲೆಯ ತಾಲೂಕುಗಳ ಜನರನ್ನು ಹೋರಾಟಕ್ಕೆ ಕೈ ಜೋಡಿಸುವಂತೆ ಜಾಗೃತಿ ಮೂಡಿಸಿ ಧರ್ಮಸ್ಥಳ ಚಲೋ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪ್ರಕರಣದ ಮರು ತನಿಖೆ ನಡೆಸುವಂತೆ ಆಗ್ರಹಿಸಿ ದೂರು ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ನಿರ್ಣಯಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸೌಜನ್ಯ ತಾಯಿ ಕುಸುಮಾದೇವಿ, ವಿಶ್ರಾಂತ ಕುಲಪತಿ ಕುಲಪತಿ ಸಬಿಹಾ ಭೂಮಿಗೌಡ, ಸಾಹಿತಿ ನಾ.ದಿವಾಕರ, ಕವಿತಾ ಪ.ಮಲ್ಲೇಶ್, ದಸಂಸ ಸಂಚಾಲಕ ಬೆಟ್ಟಯ್ಯಕೋಟೆ, ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು ಹಾಗೂ ಇತರರು ಇದ್ದರು
ಕೋಟ್
ಧರ್ಮಸ್ಥಳದ ಇಷ್ಟೊಂದು ಅಧರ್ಮ ನಡೆಯುತಿದ್ದರೂ ಯಾವ ರಾಜಕೀಯ ನಾಯಕರೂ ಇದರ ಬಗ್ಗೆ ಮಾತನಾಡುತಿಲ್ಲ. ಮೈಸೂರು ನ್ಯಾಯಪರ ಹೋರಾಟಕ್ಕೆ ಹೆಚ್ಚು ಧನಿಯಾಗಿದೆ. ಧರ್ಮಸ್ಥಳಕ್ಕೆ ದೇಶದಾದ್ಯಂತ ಲಕ್ಷಾಂತರ ಜನರು ಹೋಗುತ್ತಾರೆ. ಆದರೆ, ಅಲ್ಲಿ ನಡೆಯುತ್ತಿರುವ ದೌರ್ಜನ್ಯ ಬೆಳಕಿಗೆ ಬರುವುದಿಲ್ಲ. ಧರ್ಮಸ್ಥಳದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅಧರ್ಮ ಕೊನೆಗಾಣಿಸಲು ಈ ಜನಾಂದೋಲನವನ್ನು ಎಲ್ಲರೂ ಬೆಂಬಲಿಸಬೇಕು.
-ಬಸಲಿಂಗಯ್ಯ, ಹಿರಿಯ ರಂಗಕರ್ಮಿ

RELATED ARTICLES
- Advertisment -
Google search engine

Most Popular