ಯಳಂದೂರು: ನ್ಯಾಯಮೂರ್ತಿ ನಾಗಮೋಹನ ದಾಸ್ ಆದ್ಯಕ್ಷತೆಯಲ್ಲಿ ಒಳಮೀಸಲಾತಿ ಏಕ ಸದಸ್ಯ ಆಯೋಗವು ಸಲ್ಲಿಸಿರುವ ವದಿಯಲ್ಲಿ ಅನೇಕ ಲೋಪಗಳಿದ್ದು ಇದರಿಂದ ಬಲಗೈ ಸಮುದಾಯದ ಛಲವಾದಿ ಹೊಲಯ ಸಮುದಾಯಕ್ಕೆ ಅನ್ಯಾಯವಾಗಿದ್ದು ಈ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಪಟ್ಟಣದಲ್ಲಿ ಯಳಂದೂರು ತಾಲೂಕು ಬಲಗೈ ಸಮುದಾಯಕ್ಕೆ ಸೇರಿದ ಛಲವಾದಿ ಹೊಲಯ ಒಳ ಮೀಸಲಾತಿಯ ಹೋರಾಟ ಸಮಿತಿ ವತಿಯಿಂದ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದಿಂದ ಹೊರಟ ಪ್ರತಿಭಟನಾಕಾರರು ಈ ವರದಿ ವಿರುದ್ಧ ದಿಕ್ಕಾರ ಕೂಗುತ್ತ ಬಸ್ ನಿಲ್ದಾಣ, ಕೆ.ಕೆ. ರಸ್ತೆಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾವಣೆಗೊಂಡರು.
ಈ ಸಂದರ್ಭದಲ್ಲಿ ಮುಖಂಡ ಕಿನಕಹಳ್ಳಿ ರಾಚಯ್ಯ ಮಾತನಾಡಿ, ನ್ಯಾಮೂರ್ತಿ ನಾಗಮೋಹನದಾಸ್ ಸಮಿತಿಯ ವರದಿಯಲ್ಲಿ ಹಲವು ಲೋಪಗಳಿವೆ. ಶಿಕ್ಷಕರನ್ನು ಇದಕ್ಕೆ ನೇಮಿಸಿ ಅವರಿಗೆ ಟ್ಯಾಬ್ ನೀಡಿಲ್ಲ. ಗುಣಮಟ್ಟದ ಮೊಬೈಲ್ ಇಲ್ಲದೆ ಅಂಕಿಅಂಶಗಳು ನಿಖರವಾಗಿ ದಾಖಲಾಗಿಲ್ಲ. ಆಧಾರ್ ಇಲ್ಲದ ಮಕ್ಕಳನ್ನು, ಪಡಿತರ ಚೀಟಿಯಲ್ಲಿ ಹೆಸರು ಇಲ್ಲದವರನ್ನು ಇದರಲ್ಲಿ ಸೇರ್ಪಡೆಗೊಳಿಸಿಲ್ಲ. ಗಣತಿದಾರರಿಗೆ ಮೊಬೈಲ್ ಮೂಲಕ ತರಬೇತಿ ನೀಡಿದ್ದು ಸಮರ್ಥವಾಗಿ ಇವರು ಇದನ್ನು ನಿಭಾಯಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಬೂತ್‌ಗಳಲ್ಲಿ ಸಮೀಕ್ಷೆ ಮಾಡುತ್ತೇವೆಂದು ಇದನ್ನು ಮಾಡಿಲ್ಲ. ಬೆಂಗಳೂರು ನಗರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಶೇ. ೪೮ ಗಣತಿಯೂ ಪೂರ್ಣಗೊಂಡಿಲ್ಲ. ವಾಸ್ತವಿಕ ಕುಟುಂಬಗಳನ್ನು ಸರ್ವೆ ಮಾಡಿಲ್ಲ. ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಜಾತಿಗಳಲ್ಲದ ಗುಂಪಿಹೆ ಶೇ. ೧ ರಷ್ಟು ಮೀಸಲಾತಿ ನೀಡಿರುವುದು ಅವೈಜ್ಞಾನಿಕವಾಗಿದೆ. ಬೇಡ, ಜಂಗಮ ಜಾತಿಯನ್ನು ಸಮೀಕ್ಷೆಯಲ್ಲಿ ನಮೂದಿಸಲಾಗಿದೆ. ಆದರೆ ಇವರಿಗೆ ಜಿಲ್ಲಾಧಿಕಾರಿಗಳಿಂದ ಸಿಂಧುತ್ವ ಪ್ರಮಾಣ ಪತ್ರ, ಜಾತಿ ಪತ್ರ ಸಲ್ಲಿಸಿಲ್ಲ ಹಾಗಾಗಿ ನಿಜವಾದ ಅಸ್ಪೃಶ್ಯರಿಗೆ ಅನ್ಯಾಯವಾಗಿದೆ ಹಾಗಾಗಿ ಇದರಲ್ಲಿ ನಮಗೆ ಅನ್ಯಾಯವಾಗಿದೆ ಎಂದರು.
ಮುಖಂಡ ಕೆಸ್ತೂರು ಸಿದ್ದರಾಜು ಮಾತನಾಡಿ, ಸಮಿತಿಯ ದತ್ತಾಂಶಗಳನ್ನು ದೃಢೀಕರಿಸಲು ೧೫ ದಿನಗಳ ಕಾಲಾವಕಾಶ ನೀಡಿ ಆಕ್ಷೇಪಣೆಗಳನ್ನು ತಂತ್ರಾಂಶದ ಮೂಲಕ ಆಹ್ವಾನಿಸಬೇಕು. ಸ್ವೀಕೃತ ದೂರುಗಳನ್ನು ಆಧರಿಸಿ ಮೀಸಲಾತಿ ಮರು ಹಂಚಿಕೆಗೆ ಕ್ರಮ ವಹಿಸಬೇಕು. ಆಯೋಗವು ದುರುದ್ದೇಶಪೂಕರವಾಗಿ ಪರವನ್ ಸಮುದಾಯವನ್ನು ಎಡಗೈ ಮಾದಿಗ ಗುಂಪಿಗೆ ಸೇರಿರುವುದನ್ನು ರದ್ದು ಮಾಡಿ ಬಲಗೈ ಹೊಲಯ ಗುಂಪಿಗೆ ಸೇರ್ಪಡೆ ಮಾಡಬೇಕು. ಶೇ. ೧ ರ ಗುಂಪಿನಲ್ಲಿರುವ ಬಲಗೈ ಹೊಲಯ ಜನರನ್ನು ನಮ್ಮ ಗುಂಪಿಗೆ ಸೇರಿಸಬೇಕು. ಜಾತಿಗಳೇ ಇಲ್ಲದ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಸಮೂಹಗಳಿಗೆ ನಿಗಧಿಪಡಿಸಿರುವ ಶೇ. ೧ ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಆಯಾ ಜಾತಿಗಳಿಗೆ ಮರು ಹಂಚಿಕೆ ಮಾಡಬೇಕು ಎಂದರು.
ಯರಿಯೂರು ರಾಜಣ್ಣ ಈ ಮನವಿಯನ್ನು ತಹಸೀಲ್ದಾರ್ ಎಸ್.ಎಲ್. ನಯನರವರ ಮುಂದೆ ಓದಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಇದನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು ಎಂದರು. ಮುಖಂಡರಾದ ಕಂದಹಳ್ಳಿ ನಾರಾಯಣ, ನಂಜುಂಡಸ್ವಾಮಿ, ಉಮಾಶಂಕರ, ಮಲ್ಲು, ನಿರಂಜನ್, ಶ್ರೀನಿವಾಸ, ಯರಿಯೂರು ನಾಗೇಂದ್ರ ಜಯರಾಂ. ಮಹದೇವ, ಲಿಂಗರಾಜು, ಸುರೇಶ, ಮಾದೇಶ, ಶಾಂತರಾಜು, ಪ್ರಕಾಶ್, ನಟರಾಜು ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳಿಂದ ಬಂದಿದ್ದ ಅನೇಕರು ಇದ್ದರು.