ಮಂಗಳೂರು (ದಕ್ಷಿಣ ಕನ್ನಡ): ನಿವೇಶನ ರಹಿತರಿಗೆ ಮನೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಬೆಳ್ಮ ಗ್ರಾಮದ ನಿವೇಶನರಹಿತರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಕಚೇರಿಯೆದುರು ಪ್ರತಿಭಟನೆ ನಡೆಸಿದರು.
ಬೆಳ್ಮಗ್ರಾಮದ ಎಲ್ಲಾ ನಿವೇಶನ ರೈತರಿಗೆ ಸ್ಥಳ ಗುರುತಿಸಿ ನಿವೇಶನ ಹಂಚಿ ಕೊಡಲು ತುರ್ತು ಪ್ರಯತ್ನ ಮಾಡಬೇಕು, ಹಕ್ಕು ಪತ್ರವಿಲ್ಲದವರಿಗೆ ಹಕ್ಕು ಪತ್ರ ಕೊಡಬೇಕು, ಹಲವಾರು ವರ್ಷದಿಂದ ಹಕ್ಕುಪತ್ರವಿದ್ದು ಮನೆನಿವೇಶನ ಸಿಕ್ಕಿಲ್ಲ ಅದಕ್ಕೆ ಕ್ರಮಕೈಗೊಳ್ಳಬೇಕು ಹಾಗೂ ಮಳೆಯಿಂದ ನಷ್ಟ ಹೊಂದಿದ ಎಲ್ಲರಿಗೂ ಪರಿಹಾರ ಕೊಡಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ನೀಡಿದರು.

ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ನಾಲ್ಕು ವರ್ಷದಲ್ಲಿ ದ.ಕ ಜಿಲ್ಲೆಯಲ್ಲಿ ಒಂದೇ ಒಂದು ತುಂಡು ಭೂಮಿ ಯಾರಿಗೂ ಕೊಟ್ಟಿಲ್ಲ, ಯಾರಿಗೂ ಒಂದೇ ಒಂದು ಮನೆ ಕಟ್ಟಿ ಕೊಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಹೇಳಿರುವಾಗ ಈ ಅಧಿಕಾರಿಗಳು ಬಡವರಿಗೆ ಬೇಕಾಗಿ ಏನು ಮಾಡಿದ್ದಾರೆ, ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿ ಮತ್ತು ತಹಶಿಲ್ದಾರ್ ಗಳೇ ಕಾರಣ , ಜನಪ್ರತಿನಿಧಿಗಳಿಗೆ ಮೂಗುದಾರ ಹಾಕುವ ಅಧಿಕಾರಿಗಳೇ ಇಂದು ಭ್ರಷ್ಟಾಚಾರ ದಿಂದ ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಾರೆ ಎಂದರು.
ಜಿಲ್ಲಾ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಉಳ್ಳಾಲ ರೈತ ಸಂಘದ ಕಾರ್ಯದರ್ಶಿ ಜಯಂತ್ ಅಂಬ್ಲಮೊಗರು, ರೈತ ಸಂಘದ ಜಿಲ್ಲಾ ನಾಯಕ ಜಯಂತ್ ನಾಯಕ್, ವಿಶ್ವನಾಥ ತೇವುಲ,ಶೇಖರ್ ಕುಂದರ್, ರೈತ ಸಂಘದ ಉಳ್ಳಾಲ ನಾಯಕ್ ಇಬ್ರಾಹಿಮ್ ಮದಕ, ಡಿವೈ.ಎಫ್.ಐ ಉಳ್ಳಾಲ ಅಧ್ಯಕ್ಷ ರಿಝ್ವಾನ್, ಮಾಜಿ ಅಧ್ಯಕ್ಷ ರಫೀಕ್ ಹರೇಕಳ, ಬೆಳ್ಮ ರೈತ ಸಂಘದ ಕಾರ್ಯದರ್ಶಿ ಕೇಶವ, ಉಮ್ಮರ್ ಹರೇಕಳ, ಉಸ್ಮಾನ್, ಎವರೀಸ್, ಪ್ರಮೋದಿನಿ ಮೊದಲಾದವರು ಉಪಸ್ಥಿತರಿದ್ದರು.