ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಡಿಜಿಟಲ್ ಅಂಕಪಟ್ಟಿ ಬದಲು ಮುದ್ರಿತ ಅಂಕ ಪಟ್ಟಿ ನೀಡುವಂತೆ ಹಾಗೂ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಪೆಢರೇಷನ್ ವತಿಯಿಂದ ಕ್ರಾರ್ಫರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮೈಸೂರು ವಿಶ್ವವಿದ್ಯಾನಿಲಯ ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿದೆ. ಇಲ್ಲಿ ಶಿಕ್ಷಣ ಪಡೆಯಲು ಹೊರ ರಾಜ್ಯ, ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ವಿವಿಯ ಪ್ರತಿಯೊಂದು ವಿಭಾಗದಲ್ಲಿ ಒಂದಲ್ಲೊಂದು ಸಮಸ್ಯೆಗಳಿವೆ. ವಿದ್ಯಾರ್ಥಿಗಳ ಅಂಕಪಟ್ಟಿ ಶುಲ್ಕವನ್ನು ಪರೀಕ್ಷ ಶುಲ್ಕದೊಂದಿಗೆ ಪಡೆದುಕೊಳ್ಳಲಾಗಿದೆ. ಆದರೆ, ಅಂಕಪಟ್ಟಿ ಮಾತ್ರ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ವಿವಿ ಆಡಳಿತ ಕಚೇರಿಯಲ್ಲಿ ಅಂಕಪಟ್ಟಿಯ ಬಗ್ಗೆ ಕೇಳಿದರೆ ವಿವಿಯಲ್ಲಿ ಅಂಕಪಟ್ಟಿ ಮುದ್ರಿಸಲು ಹಣವಿಲ್ಲ, ನೀವು ಡಿಜಿಟಲ್ ಲಾಕರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಆದರೆ, ಡಿಜಿ ಲಾಕರ್‌ನಲ್ಲಿ ಯಾವುದೇ ಅಂಕಪಟ್ಟಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹಲವು ವಿದ್ಯಾರ್ಥಿಗಳು ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿ ವೇತನವನ್ನೂ ಪಡೆಯಲು ಆಗುತ್ತಿಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ, ಉದ್ಯೋಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಕಡ್ಡಾಯವಾಗಿ ಬೇಕು. ಹೀಗಾಗಿ ವಿವಿ ವಿದ್ಯಾರ್ಥಿಗಳಿಗೆ ಕೂಡಲೇ ಅಂಕಪಟ್ಟಿ ನೀಡಬೇಕೆಂದು ಒತ್ತಾಯಿಸಿದರ.
ವಿದ್ಯಾರ್ಥಿಗಳು ವಿವಿಯ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳಾ ಹಾಸ್ಟೆಲ್‌ಗಳಂತೂ ಬಹುತೇಕ ಶಿಥಿಲಗೊಂಡಿವೆ. ಸರಿಯಾದ ಕಿಟಕಿ ಸಹ ಇಲ್ಲದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಹೀಗಾಗಿ ಕೂಡಲೇ ಶಿಥಿಲಗೊಂಡಿರುವ ಹಾಸ್ಟೆಲ್ ಕೊಠಡಿಗಳನ್ನು ಸರಿಪಡಿಸಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು. ಎಲ್ಲ ಪದವೀಧರರಿಗೆ ಮುದ್ರಿತ ಅಂಕಪಟ್ಟಿ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.