ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತುಪಡಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಇಲ್ಲದಿದ್ದರೆ ಸೋಮಶೇಖರ್ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ ಎಂದು ಮುಖಂಡ ನವೀನ್‌ಕುಮಾರ್ ಸವಾಲೆಸೆದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮಶೇಖರ್ ಅವರು ಚುನಾವಣೆಯಲ್ಲಿ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅವರು ಕೆಪಿಸಿಸಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪತ್ರ ಕಳುಹಿಸಿದ್ದಾರೆ. ಒಂದು ವೇಳೆ ಅವರಿಗೆ ಅನ್ಯಾಯವಾಗಿದ್ದರೆ ಸ್ಥಳೀಯ ಘಟಕಕ್ಕೆ ದೂರು ನೀಡಬೇಕಾಗಿತ್ತು. ಆದರೆ, ಆ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕಾರಣವಾದರೂ ಏನು? ನನ್ನ ರಾಜಕೀಯ ಏಳಿಗೆ ಸಹಿಸದ ಕಾರಣ ಈ ರೀತಿಯ ಆರೋಪ ಮಾಡುವುದು ಹಿರಿಯರಾದ ಎಂ.ಕೆ.ಸೋಮಶೇಖರ್ ಅವರ ವ್ಯಕ್ತಿತ್ವಕ್ಕೆ ತಕ್ಕುದಲ್ಲ. ನಿಮ್ಮ ಸೋಲಿನ ಹಣೆಪಟ್ಟಿಯನ್ನು ಬೇರೆಯವರಿಗೆ ಕಟ್ಟುವುದು ಸರಿಯಲ್ಲ. ನಾನು ಒಂದು ಪರ್ಸೆಂಟ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇನೆ ಎಂದು ಸಾಬೀತು ಪಡಿಸಿ. ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಸವಾಲು ಹಾಕಿದರು.
ನಾನು ಕೇವಲ ಕೆ.ಆರ್.ಕ್ಷೇತ್ರ ಮಾತ್ರವಲ್ಲದೆ ಹಲವು ಕಡೆ ಪ್ರಚಾರ ಮಾಡಿದ್ದೇನೆ. ಎಲ್ಲೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಈ ಹಿಂದೆಯೂ ಎಂ.ಕೆ.ಸೋಮಶೇಖರ್ ಸೋತಿದ್ದಾರೆ. ಆ ಸೋಲಿಗೆಲ್ಲಾ ನಾನೇ ಕಾರಣನಾ? ಕಳೆದ ಬಾರಿಗೆ ಹೋಲಿಸಿದರೆ ಅವರಿಗೆ ಈ ಬಾರಿ ಹೆಚ್ಚು ಮತಗಳು ಬಂದಿವೆ. ಇದಕ್ಕೆ ನಮ್ಮಂತಹವರ ಶ್ರಮ ಕಾರಣವಲ್ಲವೇ? ಸೋಲಿಗೆ ನಾನು, ಗೆಲುವಿಗೆ ಅವರು ಜವಾಬ್ದಾರರಾ? ಕೆಪಿಸಿಸಿ ಈ ಕುರಿತು ತನಿಖೆ ಮಾಡಿ ಸತ್ಯಾಂಶ ಹೊರತರುವ ಕೆಲಸ ಮಾಡಬೇಕು. ನಾನು ಯಾವುದೇ ರೀತಿಯ ತನಿಖೆಗೂ ಸಿದ್ಧನಿದ್ದೇನೆ. ನನ್ನನ್ನು ಆರೋಪ ಮುಕ್ತರನ್ನಾಗಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆಯುತ್ತೇನೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಎಂ. ರಾಜೇಶ್, ಸುನಿಲ್‌ಕುಮಾರ್, ಭರತ್‌ಕುಮಾರ್ ಹಾಜರಿದ್ದರು.