ರಾಮನಗರ: ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯ,ಗುಣಮಟ್ಟದ ಉಪಹಾರ, ಮೊಟ್ಟೆ ಹಾಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ ೨೦೧೩ರ ಅನುಷ್ಠಾನ ಸಂಬಂಧ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಪೌರಕಾರ್ಮಿಕರಿಗೆ, ವಾಹನ ಚಾಲಕರಿಗೆ, ಲೋಡರ್‍ಸ್, ಸ್ವಚ್ಚಗಾರರಿಗೆ, ಯುಜಿಡಿ ಕಾರ್ಮಿಕರಿಗೆ ವರ್ಷಕ್ಕೆ ಒಮ್ಮೆ ಮಾಸ್ಟರ್ ಹೆಲ್ತ್ ಚೆಕ್ ಆಪ್ ಸೇರಿದಂತೆ ಸಾಮಾನ್ಯ ಆರೋಗ್ಯ ಪರೀಕ್ಷೆ ಮಾಡಿಸಬೇಕು. ಅಗತ್ಯವಿರುವ ಚುಚ್ಚು ಮದ್ದುಗಳನ್ನು ಕಾಲ ಕಾಲಕ್ಕೆ ನೀಡಬೇಕು ಹಾಗೂ ಅಪಘಾತ ವಿಮೆ, ಜೀವ ವಿಮೆ ಮಾಡಿಸಿ ಅದರ ಅನುಪಾಲನಾ ವರದಿಯನ್ನು ನೀಡುವಂತೆ ತಿಳಿಸಿದರು.
ಹೊರಗುತ್ತಿಗೆ ನೌಕರರಿಗೆ ಭವಿಷ್ಯ ನಿಧಿ(ಪಿ.ಎಫ್) ಹಾಗೂ ಕಾರ್ಮಿಕರ ಆರೋಗ್ಯ ವಿಮೆ(ಇ.ಎಸ್.ಐ)ಯನ್ನು ಜಮೆ ಮಾಡಬೇಕು ಹಾಗೂ ಈ ಕುರಿತು ಯಾವುದೇ ಸಮಸ್ಯೆ ಇದ್ದರೆ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳುವಂತೆ ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳಿಗೆ/ಸ್ವಚ್ಛತಾ ಸಿಬ್ಬಂದಿಗಳಿಗೆ ಪರಿಕರಗಳಾದ ಹ್ಯಾಂಡ್ ಗ್ಲೌಸ್, ಮಾಸ್ಕ್, ಸಮವಸ್ತ್ರ, ಚಪ್ಪಲಿಗಳು, ಗಂಬೂಟ್, ಸೈಟರ್, ಕ್ಯಾನ್‌ವಾಸ್ ಶೂ, ರೇಡಿಯಂ ಜಾಕೇಟ್, ಹ್ಯಾಂಡ್ ಸ್ಯಾನಿಟೈಜರ್, ಏಪ್ರಾನ್, ರೈನ್‌ಕೋಟ್, ಫೇಸ್ ಶೀಲ್ಡ್ ಹ್ಯಾಟ್ ಎಲ್ಲಾ ಸುರಕ್ಷತಾ ಪರಿಕರಗಳನ್ನು ಒದಗಿಸುವಂತೆತಿಳಿಸಿದರು ಹಾಗೂ ಪೌರಕಾರ್ಮಿಕರು ಎಲ್ಲಾ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಧರಿಸಿಕೊಂಡು ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಪೌರಕಾರ್ಮಿಕರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಸಲುವಾಗಿ ಪೌರಕಾರ್ಮಿಕ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರತಿಷ್ಠತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಧನಸಹಾಯ ನೀಡಲು ಕ್ರಮವಹಿಸುವಂತೆ ತಿಳಿಸಿದರು. ರಾಮನಗರ ಸುತ್ತಮುತ್ತಲು ಸ್ಲಂಬೋರ್ಡ್‌ನಲ್ಲಿ ವಾಸಿಸುತ್ತಿರುವ ಜನರಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಹಾಗೂ ಸಮುದಾಯ ಭವನ ಕಟ್ಟಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯು.ಜಿ.ಡಿ ಕಾರ್ಯವನ್ನು ನಿರ್ವಹಿಸುತ್ತಿರುವ ಕಾರ್ಮಿಕರುಗಳಿಗೆ ಜಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳನ್ನು ಬಳಸುವ ಬಗ್ಗೆ ಹೆಚ್ಚಿನ ತರಬೇತಿಯನ್ನು ನುರಿತ ತರಬೇತುದಾರರಿಂದನೀಡುವಂತೆ ತಿಳಿಸಿದರು.
ವೃಂದ ಮತ್ತು ನೇಮಕಾತಿ ಅನ್ವಯ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಬಗ್ಗೆ ಪರಿಶೀಲಿಸಿ ಆದೇಶ ಹೊರಡಿಸಲಾಗುವುದು ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಚಿಕ್ಕಸುಬ್ಬಯ್ಯ,ಜಿಲ್ಲಾ ಯೋಜನಾ ನಿರ್ದೇಶಕರಾದ ರಮೇಶ್,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶಾಂತಿಪ್ರಿಯ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರುಗಳಾದ ಶಿವಕುಮಾರ ಸ್ವಾಮಿ, ನಾಗರಾಜು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.