ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪೌತಿ ಖಾತೆ ಆಂದೋಲನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಉಪ ತಹಸೀಲ್ದಾರ್ ಸತೀಶ್ ಕುಮಾರ್ ಹೇಳಿದರು.
ಸಾಲಿಗ್ರಾಮ ಪಟ್ಟಣದ ನಾಡಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ಸಾಲಿಗ್ರಾಮ ಹೋಬಳಿ ವ್ಯಾಪ್ತಿಯಲ್ಲಿನ ಸಾರ್ವಜನಿಕರುಗಳಿಗೆ ಅನುಕೂಲವಾಗುವಂತೆ ನಾಡಕಛೇರಿಯಲ್ಲಿ ಈ ಆಂದೋಲನವನ್ನು ಆರಂಭಿಸಲಾಗಿದೆ.
ಇದುವರೆಗೂ ಪೌತಿ ಖಾತೆಯನ್ನು ಮಾಡಿಸದೆ ಇರುವವರು ಸೂಕ್ತ ದಾಖಲೆಗಳನ್ನು ಒದಗಿಸಿ ಈ ಆಂದೋಲನದಲ್ಲಿ ಭಾಗವಹಿಸಿ ಖಾತೆ ಮಾಡಿಸಿಕೊಳ್ಳಬೇಕು. ಇದರ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ನಾಡಕಛೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಪೌತಿ ಖಾತೆಗಳನ್ನು ಮಾಡಿಸಿಕೊಳ್ಳುವ ಮೂಲಕ ಪಿಎಂ ಕಿಸಾನ್, ಬೆಳೆ ಹಾನಿ ಪರಿಹಾರ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಹಲವು ಸೌಲಭ್ಯಗಳನ್ನು ಪಡೆಯಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಪೌತಿ ಖಾತೆಯ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಈ ಸಂಧರ್ಭದಲ್ಲಿ ರಾಜಸ್ವ ನಿರೀಕ್ಷಕ ಸಂತೋಷ್, ಗ್ರಾಮ ಆಡಳಿತ ಅಧಿಕಾರಿ ಶಶಿಕಾಂತ್, ನಾಡಕಚೇರಿ ಸಿಬ್ಬಂದಿಗಳು, ರೈತರು, ಸಾರ್ವಜನಿಕರು ಸೇರಿದಂತೆ ಹಲವರು ಇದ್ದರು.