ರಾಮನಗರ: ರೋಗ ಬಂದಾಗ ಪಶ್ಚಾತಾಪ ಪಡುವುದಕ್ಕಿಂತ, ರೋಗ ಬರದಂತೆ ಎಚ್ಚರ ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕ್ಷಯ ಆರೋಗ್ಯಾಧಿಕಾರಿ ಡಾ. ಕುಮಾರ್ ಅಭಿಪ್ರಾಯಪಟ್ಟರು.
ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕದ ಆಶ್ರಯದಲ್ಲಿ ಶೇಷಾದ್ರಿ ಅಯ್ಯರ್ ರವರ ಮನೆಯ ಬಳಿ ಡೆಂಘಿಯಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸೊಳ್ಳೆ ಪರದೆಗಳು, ಸೊಳ್ಳೆ ಕಾಯಲ್ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದ ಇತಿಹಾಸದಲ್ಲಿ ಭಾರತೀಯ ರೆಡ್‌ಕ್ರಾಸ್‌ಗೆ ತನ್ನದೇ ಆದ ಸೈದ್ದಾಂತಿಕ ನೆಲೆಗಟ್ಟು ಇದೆ, ಈ ನಿಟ್ಟಿನಲ್ಲಿ ಜಿಲ್ಲಾ ಘಟಕ ಆಯೋಜನೆ ಮಾಡುತ್ತಿರುವ ಕಾರ್ಯಕ್ರಮಗಳು ಅರ್ಥಪೂರ್ಣದಿಂದ ಕೂಡಿವೆ ಎಂದು ಜಿಲ್ಲಾ ಘಟಕದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಉಪಸಭಾಪತಿ ಹಾಗೂ ಕರ್ನಾಟಕ ರಾಜ್ಯದ ರೆಡ್‌ಕ್ರಾಸ್ ನಿರ್ದೇಶಕ ಬಾಲಕೃಷ್ಣ, ಭಾರತೀಯ ರೆಡ್‌ಕ್ರಾಸ್‌ಗೆ ತನ್ನದೇ ಆದ ಪರಂಪರೆ ಇದೆ, ಸೇವೆಗೆ ಮತ್ತೊಂದು ಹೆಸರೇ ಭಾರತೀಯ ರೆಡ್‌ಕ್ರಾಸ್ ಆಗಿದೆ, ಸಮಾಜದಲ್ಲಿ ರೆಡ್‌ಕ್ರಾಸ್‌ಗೆ ವಿಶೇಷವಾದ ಗೌರವವಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಶಿಧರ್, ಡೆಂಘಿ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿರುವುದು ಸಮಾಧಾನವಾಗಿದ್ದು, ನಮ್ಮ ಮನೆಯ ಸುತ್ತಮುತ್ತ ಸ್ವಚ್ಚತೆ ಮಾಡಿಕೊಳ್ಳದಿರುವುದು, ಮನೆಯ ಬಳಿ ಟೈರ್, ಮಡಿಕೆಯ ಚೂರು, ಎಳೆನೀರು ಬುಂಡೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ನೀರು ಶೇಖರಣೆಯಾಗಿ, ಅಲ್ಲಿ ಉತ್ಪತ್ತಿಯಾಗುವ ಈಡೀಸ್ ಎಂಬ ಸೊಳ್ಳೆಯಿಂದ ಈ ರೋಗಗಳು ದ್ವಿಗುಣಗೊಳ್ಳುತ್ತಿವೆ ಎಂದು ತಿಳಿಸಿದರು.
ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ಬಾಬು ಮಾತನಾಡಿ, ಭಾರತೀಯ ರೆಡ್‌ಕ್ರಾಸ್ ಸೇವೆಗೆ ಎಷ್ಟು ಪ್ರಶಂಸೆ ಮಾಡಿದರು ಸಾಲದು, ಸಮಾಜದಲ್ಲಿ ಯಾವ್ಯದೇ ರೀತಿಯ ವಿಪತ್ತುಗಳು ಬಂದಾಗ, ತಮ್ಮ ಪ್ರಾಣವನ್ನು ಲೆಕ್ಕಿಸದೆ, ಸರ್ವಜನರ ಸೇವೆಯಲ್ಲಿ ನಿರತವಾಗುವ ರೆಡ್‌ಕ್ರಾಸ್ ಸೇವೆ ಅನನ್ಯವಾಗಿದೆ ಎಂದರು.

ಚನ್ನಪಟ್ಟಣ ತಾಲ್ಲೂಕು ಭಾರತೀಯ ರೆಡ್‌ಕ್ರಾಸ್‌ನ ಸಭಾಪತಿ ಮದೂಸೂದನ್ ಮಾತನಾಡಿ, ಸೇವೆಯನ್ನು ಮಾಡಬೇಕಾದರೆ ಮೊದಲು ಇಚ್ಚಾಶಕ್ತಿ ಇರಬೇಕು, ಅದರಂತೆ ಸಮಾಜದಲ್ಲಿ ಮೇಲು, ಕೀಳು, ಸಮುದಾಯದ ತಾರತಮ್ಯಗಳನ್ನು ಬದಿಗೊತ್ತಿ ಮನುಷ್ಯನೊಂದೆ ಧರ್ಮ ಎಂದು ಆತನ ಕಷ್ಟದಲ್ಲಿ ಭಾಗಿಯಾಗುವ ಸಂಸ್ಥೆ ಇದ್ದರೇ ಅದು ಭಾರತೀಯ ರೆಡ್‌ಕ್ರಾಸ್ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಚಾರವಾದಿಗಳು, ಸಮಾಜ ಸೇವಕರಾದ ಶಂಕರಯ್ಯ, ಭಾರತೀಯ ರೆಡ್‌ಕ್ರಾಸ್ ಜಿಲ್ಲಾಘಟಕದ ಸಭಾಪತಿ ಶೇಷಾದ್ರಿ ಅಯ್ಯರ್ ಹಾಗೂ ಹಲವಾರು ಮಂದಿ ಮುಖಂಡರು ಮಾತನಾಡಿದರು. ವೇದಿಕೆಯ ಮೇಲೆ ಭಾರತೀಯ ರೆಡ್‌ಕ್ರಾಸ್‌ನ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್. ರುದ್ರೇಶ್ವರ, ಖಜಾಂಚಿ ಪರಮಶಿವಯ್ಯ, ಸಹಕಾರ್ಯದರ್ಶಿ ಚಂದ್ರಶೇಖರಯ್ಯ, ಜಿಲ್ಲಾಮಟ್ಟದ ಪದಾಧಿಕಾರಿ ನರೇಂದ್ರ, ಕಾರ್ಯದರ್ಶಿ ವಿನಯ್‌ಕುಮಾರ್, ವಿಚಾರವಂತರು, ಮುಖ್ಯಶಿಕ್ಷಕರು ಡಾ. ಮಹೇಂದ್ರ ಕುಮಾರ್, ರೆಡ್‌ಕ್ರಾಸ್‌ನ ಶಿವಕುಮಾರ್ ಹಾಗೂ ಬೆಂಗಳೂರಿನ ಪ್ರಸಿದ್ದ ಪ್ಯಾಂಡಾಕ್ಸ್ ಆಸ್ಪತ್ರೆಯ ಆರೋಗ್ಯ ರಕ್ಷಕರಾದ ಕಾರ್ತಿಕ್, ಮರಿಯಂ ಹಾಗೂ ಹಲವಾರು ಮಂದಿ ಹಾಜರಿದ್ದರು.