ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ-೩ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ ೭೫,೪೬೬ ವಿದ್ಯಾರ್ಥಿಗಳಲ್ಲಿ ೧೭,೯೧೧ ಮಂದಿ (ಶೇ ೨೩.೭೩) ತೇರ್ಗಡೆಯಾಗಿದ್ದಾರೆ.
೪೪,೦೨೭ ಬಾಲಕರಲ್ಲಿ ೯,೫೩೧ (ಶೇ ೨೧.೬೫) ಹಾಗೂ ೩೧,೪೩೯ ಬಾಲಕಿಯರಲ್ಲಿ ೮,೩೮೦ (ಶೇ ೨೬.೬೫) ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ ೨೭.೦೬, ವಾಣಿಜ್ಯದಲ್ಲಿ ಶೇ ೨೩.೫೮ ಹಾಗೂ ಕಲಾ ವಿಭಾಗದಲ್ಲಿ ಶೇ ೨೧.೭೧ರಷ್ಟು ಫಲಿತಾಂಶ ಬಂದಿದೆ.
ಮರು ಮೌಲ್ಯಮಾಪನಕ್ಕೆ ಅರ್ಜಿ: ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಜುಲೈ ೨೪ರವರೆಗೆ ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಜುಲೈ ೨೧ರ ಒಳಗೆ ಅರ್ಜಿ ಸಲ್ಲಿಸಬೇಕು. ೧೮ರಿಂದ ೨೨ರವರೆಗೆ ಛಾಯಾ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸಿಇಟಿಗೆ ಪರಿಗಣನೆ: ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇದೇ ಮೊದಲ ಬಾರಿ ಆರಂಭಿಸಿದ್ದ ಮೂರು ಪರೀಕ್ಷೆಗಳು ಪೂರ್ಣಗೊಂಡಿದ್ದು, ಮೂರು ಪರೀಕ್ಷೆಗಳಲ್ಲಿ ಯಾವುದರಲ್ಲಿ ವಿದ್ಯಾರ್ಥಿಗಳು ಅಧಿಕ ಅಂಕ ಪಡೆದಿರುತ್ತಾರೋ ಅದೇ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ (ಸಿಇಟಿ) ಪರಿಗಣಿಸಲಿದೆ. ಎರಡು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಮೂರನೆಯ ಪರೀಕ್ಷೆಯಲ್ಲಿ ತೇರ್ಗಡೆಯಾದವರೂ ಸಿಟಿಇ ರ್‍ಯಾಂಕಿಂಗ್ ಪಡೆಯಬಹುದು.