ಚಾಮರಾಜನಗರ: ಪುನೀತ್ ರಾಜಕುಮಾರ್ ಮಾನವೀಯ ಮೌಲ್ಯಗಳ ಮಹಾನ್ ರತ್ನ. ನಗುಮುಖದ ದೇವ ಮಾನವ. ವಿಶ್ವಕ್ಕೆ ಆದರ್ಶವಾದ ಜೀವನ ನಡೆಸಿ, ಮಾನವ ಹೇಗೆ ಬದುಕಬೇಕು ಎಂಬುದನ್ನು ಚಿಕ್ಕವಯಸ್ಸಿನಲ್ಲಿ ತೋರಿಸಿದ ಶ್ರೇಷ್ಠ ವ್ಯಕ್ತಿ ಎಂದು ಸಂಸ್ಕೃತಿ ಚಿಂತಕ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯೂತ್ ಕ್ಲಬ್,ಜೈ ಹಿಂದ್ ಪ್ರತಿಷ್ಠಾನ ವತಿಯಿಂದ ಜೈ ಹಿಂದ್ ಕಟ್ಟೆಯಲ್ಲಿ ನಡೆದ ಪುನೀತ್ ರಾಜಕುಮಾರ್ ಸ್ಮರಣೆ ಹಾಗೂ ಅಪ್ಪು ಮತ್ತು ಮಾನವೀಯ ಮೌಲ್ಯಗಳ ಕುರಿತು ಮಾತನಾಡುತ್ತಾ ಮಾನವನ ಹುಟ್ಟು ಆಕಸ್ಮಿಕವಾದದ್ದು. ಮಾನವನ ಜನ್ಮದಲ್ಲಿ ಪ್ರತಿಕ್ಷಣವೂ ಸಮಾಜಕ್ಕೆ ಮಾನವ ಕಲ್ಯಾಣಕೆ ಅರ್ಪಿಸಿದ ಮಹಾನ್ ವ್ಯಕ್ತಿ ಪುನೀತ್ ರಾಜಕುಮಾರ್. ಪುನೀತ್ ರವರ ಕಾರ್ಯಯೋಜನೆಗಳು ,ದೂರ ದೃಷ್ಟಿ, ಸಮಾಜ ಸೇವೆ ,ದಾನ ,ಧರ್ಮ ನಮ್ಮ ಸಂಸ್ಕೃತಿ ಪರಂಪರೆಯ ರೂಪವಾಗಿದೆ. ಮರಣದ ನಂತರವೂ ಕೋಟಿ ಕೋಟಿ ಜನರ ಹೃದಯದಲ್ಲಿ ಸದಾಕಾಲ ಅಮರತ್ವ ಸ್ಥಾನ ಪಡೆದು ಸದಾ ಜೀವಂತಿಕೆಯ ರೂಪದಲ್ಲಿ ಬದುಕುತ್ತಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಅಗ್ರಗಣ್ಯರು. ಪುನೀತ್ ರಾಜಕುಮಾರ್ ಚಾಮರಾಜನಗರ ಮೂಲದವರು ಎಂಬುದು ಮತ್ತೊಂದು ನಮಗೆ ಹೆಮ್ಮೆ.
ಅವರ ಚಿತ್ರರಂಗ, ನಟನೆ ಪ್ರಕೃತಿ, ಪ್ರೇಮ, ಹಸನ್ಮುಖಿ ಜೀವಂತಿಕೆ ,ಸಾರ್ವಜನಿಕ ಬದುಕು, ಸಮಾಜ ಸೇವೆ ,ದಾನ ಧರ್ಮಗಳು ಸರ್ವರಿಗೂ ಒಳಿತನ್ನು ಬಯಸಿ ಬದುಕಿ ಬಾಳಿದ ಪುನೀತ್ ರವರ ಜೀವನ ಕೋಟಿ ಕೋಟಿ ಯುವಕರಿಗೆ ಮಾರ್ಗದರ್ಶಕವಾಗಿದೆ. ಅವರ ಅಭಿಮಾನಿಗಳು ನಿರಂತರವಾಗಿ ಸಮಾಜಮುಖಿ ಕಾರ್ಯವನ್ನು ನೆರವೇರಿಸುತ್ತಾ ಸಾಗುತ್ತಿರುವುದು ಕಾಣಬಹುದಾಗಿದೆ. ಮಾನವೀಯ ಮೌಲ್ಯಗಳು ಭಗವಂತನ ರೂಪದಲ್ಲಿ ಕಾಣಿಸಿಕೊಂಡಿದೆ. ಪ್ರೀತಿ ವಿಶ್ವಾಸ ,ಅಭಿಮಾನ, ಸರಳತೆ ಸಹನೆ, ಸಹಕಾರ, ದೃಷ್ಟಿ ,ಚಿಂತನೆ ಸರ್ವವು ನಮಗೆ ದಾರಿದೀಪವಾಗಿದೆ . ಮಾನವೀಯ ಮೌಲ್ಯಗಳ ಹರಿಕಾರರು ಪುನೀತ್ ರಾಜಕುಮಾರ್ ಎಂದರು.
ಪುನೀತ್ ರವರ ಚಿತ್ರಗಳ ಮೂಲಕ ಅಭಿಮಾನ ಹೊಂದಿದ್ದ ನಮಗೆ ಅವರ ಚಿತ್ರಗಳು ಹಾಗೂ ಅವರ ಜೀವನದ ಬಹುದೊಡ್ಡ ಕೊಡುಗೆಗಳ ಬಗ್ಗೆ ತಿಳಿದ ನಂತರ ವಿಸ್ಮಯವಾಗಿದೆ. ಅವರ ಅಂತ್ಯ ಸಂಸ್ಕಾರದಲ್ಲಿ ಕಂಡು ಕೇಳದ , ನೋಡದ ಜನಸಾಗರ ಬಂದದ್ದು ಇತಿಹಾಸ. ಮರಣದ ನಂತರ ಬದುಕಿರುವ ಮಹಾನ್ ಜೀವ ಪುನೀತ್ ಎಂದು ಋಗ್ವೇದಿ ಅಭಿಪ್ರಾಯ ಪಟ್ಟರು.
ಪುನೀತ್ ಅಭಿಮಾನಿ ಲೋಕೇಶ್ ಮಾತನಾಡಿ ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೀಯ ದಿನ ಅವರ ಮಾನವೀಯ ಮೌಲ್ಯಗಳ ಕುರಿತು ಹೇಳುವುದು ಬಹು ದೊಡ್ಡ ಕಷ್ಟದ ವಿಷಯ. ಯಾರಿಗೂ ತಿಳಿಯದ ಹಾಗೆ ಸಾವಿರಾರು ಸಮಾಜದ ಕಾರ್ಯವನ್ನು ನಿರ್ವಹಿಸಿದ ಪುನೀತ್ ಇಂದು ಕೋಟಿ ಕೋಟಿ ಜನರಿಗೆ ಆದರ್ಶ ಎಂದರು.
ಕಾರ್ಯಕ್ರಮದಲ್ಲಿ ಮಹದೇವ, ಮನು, ರವಿ, ಕುಮಾರ ,ಶಾಸ್ತ್ರಿ, ರಘು ಮುಕುಂದ ಮುಂತಾದವರು ಉಪಸ್ಥಿತರಿದ್ದರು.