ಬೆಂಗಳೂರು : ಕೋವಿಡ್-೧೯ ಎರಡನೇ ಅಲೆ ಸಂದರ್ಭದಲ್ಲಿ ದುಬಾರಿ ದರಕ್ಕೆ ಪಿಪಿಇ ಕಿಟ್‌ಗಳನ್ನು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೂಡಂಟ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ ಹಾಗೂ ಲಾಜ್ ಎಕ್ಸ್‌ಪೋರ್ಟ್ ಲಿಮಿಟೆಡ್ ಕಂಪೆನಿಗಳ ವಿರುದ್ಧದ ವರದಿಯನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ.
ಪಿಪಿಇ ಕಿಟ್ ಪೂರೈಸಿದ ಈ ಎರಡು ಖಾಸಗಿ ಸಂಸ್ಥೆಗಳ ಪರವಾಗಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ.ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ಪೀಠ ನಡೆಸಿತ್ತು. ಈ ವೇಳೆ ರಾಜ್ಯ ಸರಕಾರದ ಪರ ಹಾಜರಾಗಿದ್ದ ಎಎಜಿ ರೂಬೆನ್ ಜಾಕಬ್, ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳನ್ನು ಪೂರೈಸಲು ಪ್ರೂಡಂಟ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ ಹಾಗೂ ಲಾಜ್ ಎಕ್ಸ್‌ಪೋರ್ಟ್ ಲಿಮಿಟೆಡ್ ಕಂಪೆನಿಗಳು ಟೆಂಡರ್ ಪಡೆದುಕೊಂಡಿದ್ದವು.
ಆದರೆ, ಎರಡನೇ ಅಲೆ ಸಂದರ್ಭದಲ್ಲಿ ಹೊಸದಾಗಿ ಟೆಂಡರ್‌ನಲ್ಲಿ ಪಾಲ್ಗೊಳ್ಳದೇ ಅಧಿಕಾರಿಗಳ ಜೊತೆ ಶಾಮೀಲಾಗಿ ಈ ಎರಡು ಕಂಪೆನಿಗಳು ಆರೋಗ್ಯ ಇಲಾಖೆಗೆ ಪಿಪಿಇ ಕಿಟ್‌ಗಳನ್ನು ಪೂರೈಸಿವೆ. ಆದರೆ, ಪ್ರತೀ ಪಿಪಿಇ ಕಿಟ್‌ಗೆ ೪೦೦ ರೂ. ಮೂಲ ಬೆಲೆ ಇದ್ದದ್ದು ಅದನ್ನು ೧,೩೧೨ ರೂ.ಗೆ ಪೂರೈಸಿದ್ದಾರೆ. ಈ ಸಂಬಂಧ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರು ತನಿಖೆ ನಡೆಸಿದ್ದು, ಅಕ್ರಮ ಪತ್ತೆ ಮಾಡಿದ್ದಾರೆ. ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಇಡೀ ಕೋವಿಡ್ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ವರದಿ ನೀಡಿದ್ದು, ಆ ವರದಿಯಲ್ಲಿ ಪ್ರೂಡಂಟ್ ಮ್ಯಾನೇಜ್‌ಮೆಂಟ್ ಸೋಲ್ಯೂಷನ್ ಹಾಗೂ ಲಾಜ್ ಎಕ್ಸ್ ಪೋರ್ಟ್ ಲಿಮಿಟೆಡ್ ಸಂಸ್ಥೆಗಳಿಗೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತು.
ವರದಿಯ ಲಕೋಟೆಯನ್ನು ತೆರೆದ ನ್ಯಾಯಪೀಠ, ಆ ವರದಿಯ ಪ್ರತಿಯನ್ನು ಖಾಸಗಿ ಸಂಸ್ಥೆಗಳ ಪರ ವಕೀಲರಿಗೆ ನೀಡುವಂತೆ ಹೆಚ್ಚುವರಿ ಅಡ್ವಕೇಟ್ ಜನರಲ್ ಅವರಿಗೆ ಸೂಚಿಸಿತು. ಅಲ್ಲದೆ ವರದಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಖಾಸಗಿ ಸಂಸ್ಥೆಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮಾರ್ಚ್ ೩ಕ್ಕೆ ಮುಂದೂಡಿತು.
೪೦೦ ರೂ ಬೆಲೆಯ ಕಿಟ್ ೧,೩೧೨ಕ್ಕೆ ಖರೀದಿ: ಒಂದು ಪಿಪಿಇ ಕಿಟ್‌ಗೆ ೪೦೦ ರೂ. ಮೂಲ ಬೆಲೆ ಇದ್ದದ್ದು ಅದನ್ನು ೧,೩೧೨ ರೂ.ಗೆ ಪ್ರೂಡಂಟ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ ಹಾಗೂ ಲಾಜ್ ಎಕ್ಸ್‌ಪೋರ್ಟ್ ಲಿಮಿಟೆಡ್ ಕಂಪೆನಿಗಳ ಪೂರೈಸಿದ್ದಾರೆ. ಈ ಸಂಬಂಧ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರು ತನಿಖೆ ನಡೆಸಿದ್ದು, ಅಕ್ರಮ ಪತ್ತೆ ಮಾಡಿದ್ದಾರೆ.