ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದುಸಂಜೆ ಭಾರತಕ್ಕಾಗಮಿಸಲಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಪ್ರಧಾನಿಯವರ ನಿವಾಸಕ್ಕೆ ತೆರಳಲಿದ್ದಾರೆ. ಪ್ರಧಾನಿ ನಿವಾಸದಲ್ಲಿ ಔತಣಕೂಟ ವ್ಯವಸ್ಥೆ ಮಾಡಲಿದ್ದು, ರಾತ್ರಿ 8.30 ರ ಸುಮಾರಿಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ನಂತರ ಅವರು ರಾತ್ರಿ ತಮ್ಮ ಹೋಟೆಲ್‌ಗೆ ಹಿಂತಿರುಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಇಡೀ ದಿನ ಅವರು ಭಾರತದಲ್ಲಿಯೇ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಗಳೊಂದಿಗಿನ ಸಭೆಯೊಂದಿಗೆ ದಿನ ಆರಂಭವಾಗುವ ಸಾಧ್ಯತೆಯಿದ್ದು, ನಂತರ ರಾಜ್‌ಘಾಟ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎನ್ನಲಾಗಿದೆ. ರಾಜ್‌ಘಾಟ್‌ನಲ್ಲಿ 30 ನಿಮಿಷಗಳ ಕಾಲ ಕಳೆದ ನಂತರ, ಪುಟಿನ್ ಹೈದರಾಬಾದ್ ಹೌಸ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿರುವ ಭೋಜನ ಕೂಟಕ್ಕೆ ತೆರಳಲಿದ್ದಾರೆ. ನಂತರ ಹೈದರಾಬಾದ್ ಹೌಸ್‌ನಲ್ಲಿ ಸಭೆ ನಡೆಯಲಿದೆ. ಬಳಿಕ ಸಂಜೆ ಆರ್‌ಟಿ ಟಿವಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಂತರ ಸುಮಾರು 7.30 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಭೋಜನಕ್ಕೆ ತೆರಳಲಿದ್ದಾರೆ. ಉಕ್ರೇನ್ ಸಂಘರ್ಷ ಆರಂಭವಾದ ನಂತರ ಪುಟಿನ್ ಭಾರತಕ್ಕೆ ಮೊದಲ ಬಾರಿಗೆ ಆಗಮಿಸಲಿದ್ದಾರೆ.
ಪುಟಿನ್ ಅವರ ಭದ್ರತೆಯ ಹೊಣೆ ಪ್ರೆಸಿಡೆನ್ಸಿ ಯಲ್ ಸೆಕ್ಯೂರಿಟಿ ಸರ್ವಿಸ್ ವಹಿಸಿಕೊಳ್ಳುತ್ತದೆ. ಈ ತಂಡದ ಸದಸ್ಯರು ಪುಟಿನ್ ಬಳಿಯೇ ಇರುತ್ತಾರೆ. ಇವರ ನಂತರ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಮಾಂಡೋಗಳು ಹಾಗೂ ದೆಹಲಿ ಪೊಲೀಸರು ಇರಲಿದ್ದಾರೆ. ಪುಟಿನ್ ಮತ್ತು ಮೋದಿ ಭೇಟಿ ವೇಳೆ ಮಾತ್ರ ಭಾರತದ ಎನ್‌ಎಸ್‌ಜಿ ಕಮಾಂಡೋಗಳು ರಷ್ಯಾ ಭದ್ರತಾ ಅಧಿಕಾರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಗಾಢಗೊಳಿಸುವ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ರಷ್ಯಾದ ಸಚಿವ ಸಂಪುಟ ಅನುಮೋದನೆ ನೀಡಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ರೋಸಾಟಮ್ ಸಿಇಒ ಅಲೆಕ್ಸಿ ಲಿಗಾಚೆವ್ ಅವರು ದೆಹಲಿಯಲ್ಲಿ ನಡೆಯುವ ಶೃಂಗಸಭೆಯ ಮಾತುಕತೆಗಳಲ್ಲಿ ಮಂಡಿಸಲಾಗುವ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳನ್ನು ನಿರ್ಮಿಸುವಲ್ಲಿ ಸಹಕಾರ ಸೇರಿದಂತೆ ಪ್ರಸ್ತಾವನೆಗಳ ಸಂಪೂರ್ಣ ಉಪಕ್ರಮವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.



