ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ವಿರುದ್ಧ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೆಸರು ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ. ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಅವರ ಹೆಸರುಗಳೂ ಸಹ ಚಾಲ್ತಿಯಲ್ಲಿದ್ದು, ಸಿ.ಎಸ್.ಪುಟ್ಟರಾಜು ಅವರೇ ಅಂತಿಮವಾಗಿ ಅಭ್ಯರ್ಥಿಯಾಗಲಿದ್ದಾರೆ ಎಂಬ ವಿಚಾರ ಜೆಡಿಎಸ್‌ನಲ್ಲಿ ಚರ್ಚೆಯಾಗುತ್ತಿದೆ.
೮ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬಹುತೇಕ ಖಚಿತಗೊಂಡಿದೆ, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಸಂಸದೆ ಸುಮಲತಾ ಅವರು ಬಿಜೆಪಿ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದ ಕಾರಣ ಇಲ್ಲಿಯವರೆಗೂ ಮೈತ್ರಿ ಅಭ್ಯರ್ಥಿ ಆಯ್ಕೆ ವಿಷಯ ಕಗ್ಗಂಟಾಗಿ ಉಳಿದಿತ್ತು. ಕಳೆದೆರಡು ದಿನಗಳಿಂದ ಸಿ.ಎಸ್.ಪುಟ್ಟರಾಜು ವಿಷಯ ಮುನ್ನೆಲೆಗೆ ಬಂದಿದ್ದು ಇದೇ ಹೆಸರು ಘೋಷಣೆ ಸಾಧ್ಯತೆ ಇದೆ ಎಂದು ಜೆಡಿಎಸ್ ಮುಖಂಡರು ತಿಳಿಸುತ್ತಾರೆ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರಲ್ಲಿ ಒಬ್ಬರು ಅಭ್ಯರ್ಥಿಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು.
ಆದರೆ ಎಚ್‌ಡಿಡಿ ಕುಟುಂಬ ಸದಸ್ಯರು ಸ್ಪರ್ಧಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಅವರು ಕುಟುಂಬ ಸದಸ್ಯರೇ ಸ್ಪರ್ಧಿಸುತ್ತಿರುವ ಕಾರಣ ಮಂಡ್ಯದಲ್ಲಿ ಕುಟುಂಬ ಸದಸ್ಯರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಚ್.ಡಿ.ಕುಮಾರಸ್ವಾಮಿ ಅವರೇ ಬರಬೇಕು ಎಂದು ಕೆಲ ಸ್ಥಳೀಯ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಒಂದು ವೇಳೆ ಬಿಜೆಪಿ ವರಿಷ್ಠರು ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪರ್ಧಿಸಬೇಕು ಎಂದು ಸೂಚಿಸಿದರೆ ಎಚ್‌ಡಿಕೆ ಆಯ್ಕೆ ಮಂಡ್ಯವೇ ಆಗಿರುತ್ತದೆ ಎಂಬ ಸುದ್ದಿಗಳಿವೆ.