Friday, April 18, 2025
Google search engine

Homeರಾಜ್ಯಸುದ್ದಿಜಾಲಗುಣಮಟ್ಟದ ರಾಗಿ, ಭತ್ತ, ಖರೀದಿಗೆ ಬೆಂಬಲ ಬೆಲೆ ನಿಗದಿ : ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಗೆ ಕರೆ

ಗುಣಮಟ್ಟದ ರಾಗಿ, ಭತ್ತ, ಖರೀದಿಗೆ ಬೆಂಬಲ ಬೆಲೆ ನಿಗದಿ : ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಗೆ ಕರೆ

ಮೈಸೂರು: 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್‌ಎಕ್ಯು ಗುಣಮಟ್ಟದ ರಾಗಿ, ಭತ್ತ, ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಸಾಮಾನ್ಯ ಭತ್ತ ಕ್ವಿಂಟಾಲ್ ಗೆ ರೂ.2300, ರಾಗಿ ಕ್ವಿಂಟಾಲ್ ಗೆ ರೂ. 4290 ಇದ್ದು ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಯನ್ನು ಖರೀದಿ ಏಜೆನ್ಸಿ ಯನ್ನಾಗಿ ಸರಕಾರ ನೇಮಕ ಮಾಡಿದ್ದು ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತದೆ.

ಸರ್ಕಾರದ ಮಾನದಂಡಗಳ ಅನ್ವಯ ಎಫ್‌ಎಕ್ಯು ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಸೂಕ್ತ ದಾಸ್ತಾನಿಗಾಗಿ ಭತ್ತ/ರಾಗಿ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್‌ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತ/ರಾಗಿಯನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ಸೂಚನೆ ನೀಡಿದರು.

ಭತ್ತ/ರಾಗಿ ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು.

ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳೆದ ಭತ್ತ/ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತ/ರಾಗಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೊಂದಣಿ ಕೇಂದ್ರದಲ್ಲಿ ರೈತರು ಪ್ರೂಟ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಿದೆ ಎಂದು ಅವರು ತಿಳಿಸಿದರು.

ಭತ್ತದ /ರಾಗಿ ಖರೀದಿ ನೋಂದಣಿ ಪ್ರಾರಂಭವಾಗುವ ದಿನಾಂಕ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೊಂದಣಿ ಕೇಂದ್ರಗಳು ಹಾಗೂ ಭತ್ತ /ರಾಗಿ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್‌, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರವಿ, ವಾರ್ತಾಧಿಕಾರಿ ಹರೀಶ್, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳು, ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular