Thursday, April 3, 2025
Google search engine

Homeರಾಜ್ಯವಿಧಾನಸಭೆಯಿಂದ 18 ಸದಸ್ಯರ ಅಮಾನತ್ತು ಆದೇಶ ಹಿಂಪಡೆಯುವಂತೆ ಸ್ಪೀಕರ್ ಗೆ ಆರ್.ಅಶೋಕ್ ಪತ್ರ

ವಿಧಾನಸಭೆಯಿಂದ 18 ಸದಸ್ಯರ ಅಮಾನತ್ತು ಆದೇಶ ಹಿಂಪಡೆಯುವಂತೆ ಸ್ಪೀಕರ್ ಗೆ ಆರ್.ಅಶೋಕ್ ಪತ್ರ

ಬೆಂಗಳೂರು: ಕರ್ನಾಟಕ ವಿಧಾನಸಭೆಯ 18 ಸದಸ್ಯರನ್ನು ಅಮಾನತ್ತು ಮಾಡಿ ಹೊರಡಿಸಿರುವಂತ ಆದೇಶವನ್ನು ಹಿಂಪಡೆಯುವಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಭಾದ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಇಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಪತ್ರ ಬರೆದಿರುವಂತ ಅವರು, ದಿನಾಂಕ: 21.03.2025ರ ಕರ್ನಾಟಕ ವಿಧಾನಸಭೆಯ ಅಧಿವೇಶನದ ಸಮಯದಲ್ಲಿ ಸದನದಲ್ಲಿ ಹನಿಟ್ರ್ಯಾಪ್ ಹಾಗೂ ಮುಸ್ಲಿಮರಿಗೆ 4% ಮೀಸಲಾತಿ ವಿಚಾರದ ಚರ್ಚೆಯು ವಿಕೋಪಕ್ಕೆ ತಿರುಗಿದಾಗ ವಿರೋಧ ಪಕ್ಷದವರಾದ ನಾವೆಲ್ಲ ಸಭಾಧ್ಯಕ್ಷರ ಪೀಠದ ಸುತ್ತ ನಿಂತುಕೊಂಡು ಪ್ರತಿಭಟನೆ ಮಾಡಿರುತ್ತೇವೆ. ಈ ಸಂದರ್ಭದಲ್ಲಿ ತಾವು, ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡಿರುತ್ತೀರೆಂದು, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿರುತ್ತೀರೆಂದು ವಿಧಾನಸಭೆಯ 18 ಸದಸ್ಯರನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾಮಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಲಾಗಿರುತ್ತದೆ ಹಾಗೂ ಅದರ ಜೊತೆಗೆ ಇತರ ನಿರ್ಬಂಧಗಳನ್ನು ವಿಧಿಸಲಾಗಿರುತ್ತದೆ ಎಂದಿದ್ದಾರೆ.

ರಾಜ್ಯದ ವಿಧಾನಮಂಡಲದ ಉಭಯ ಸದನಗಳು ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಳಗಳು, ಈ ಸ್ಥಳಗಳು “ಪ್ರಜಾಪ್ರಭುತ್ವದ ದೇಗುಲಗಳು” ಎಂದು ಕರೆದರೆ ತಪ್ಪೇನೂ ಇಲ್ಲ. ಈ ದೇಗುಲಗಳಲ್ಲಿನ ಮಾನ್ಯ ಸಭಾಧ್ಯಕ್ಷರು ಮತ್ತು ಮಾನ್ಯ ಸಭಾಪತಿಗಳಿಗೆ ಇರುವ ಸ್ಥಾನವೂ ಅಷ್ಟೇ ಗೌರವಾನ್ವಿತವಾದುದು. ಈ ವಿಚಾರದಲ್ಲಿ ನನಗೆ ಯಾವ ಭಿನ್ನಾಬಿಪ್ರಾಯವೂ ಇಲ್ಲ ಎಂದಿದ್ದಾರೆ.

ವಿಧಾನಸಭೆಯ 18 ಶಾಸಕರನ್ನು ಅಮಾನತು ಮಾಡಿರುವ ನಿರ್ಣಯ ಅತ್ಯಂತ ಕಠೋರವಾಗಿದ್ದು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಬೇಕೆಂದು ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ.ಖಾದರ್ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದೇನೆ.

RELATED ARTICLES
- Advertisment -
Google search engine

Most Popular