ಹಾಸನ: ಹಾಸನದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಇದೀಗ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅಖಾಡಕ್ಕಿಳಿದಿದ್ದಾರೆ. ಹಾಸನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಗೆ ಪ್ರೀತಂಗೌಡ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದರು. ಬಿಜೆಪಿಯ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿಲ್ಲ ಎನ್ನುವುದು ತಪ್ಪು. ನಮ್ಮ ಕಾರ್ಯಕರ್ತರು ಪೂರ್ತಿ ಶಕ್ತಿಯೊಂದಿಗೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಆಗುವುದನ್ನು ಕಾಯುತ್ತಾ ಇದ್ದಾರೆ. ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಹೆಗಲಿಗೆ ಹೆಗಲು ಕೊಟ್ಟು ಈ ಯುದ್ಧದಲ್ಲಿ ಹೋರಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಐದು ಲಕ್ಷ ಮತಗಳು ಬಂದಿದ್ದವು. ಈ ಬಾರಿ ಜೆಡಿಎಸ್ ಐದು ಲಕ್ಷ, ಬಿಜೆಪಿ ಐದು ಲಕ್ಷ ಮತಗಳು ಸೇರಿ ಹತ್ತು ಲಕ್ಷ ಮತಗಳು ಸಿಗುತ್ತವೆ ಎಂದು ಅಗರ್ವಾಲ್ ಭರವಸೆ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಹೇಳುವ ಅಧಿಕಾರ ಇದೆ. ಆದರೆ, ಅಭ್ಯರ್ಥಿ ಘೋಷಣೆ ಆಗುವ ಮುಂಚೆ ಆಡುವ ಮಾತುಗಳಿಗೆ ಮಹತ್ವ ಕೊಡಬೇಕಿಲ್ಲ. ಅಭ್ಯರ್ಥಿ ಘೋಷಣೆ ನಂತರ ಕಾರ್ಯಕರ್ತರು ಏನು ಮಾಡುತ್ತಾರೆ ಎಂಬುದನ್ನು ನೋಡಬೇಕು. ಬಿಜೆಪಿ ಕಾರ್ಯಕರ್ತರ ಭಾವನೆ ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ತಲುಪಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಯಾರು ಆಗುತ್ತಾರೆ ಅನ್ನೋದನ್ನು ಬಿಜೆಪಿ ತೀರ್ಮಾನಿಸುವುದಿಲ್ಲ. ಅದನ್ನು ಜೆಡಿಎಸ್ ತೀರ್ಮಾನಿಸುತ್ತದೆ. ಜೆಡಿಎಸ್ ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತದೆಯೋ ಅವರ ಪರವಾಗಿ ಬಿಜೆಪಿಯ ಎಲ್ಲಾ ಶಾಸಕರು, ಕಾರ್ಯಕರ್ತರು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತಾರೆ ಎಂದು ಬಿಜೆಪಿ ಉಸ್ತುವಾರಿ ಹೇಳಿದ್ದಾರೆ.