ಕೇರಳ: ಕಾಂಗ್ರೆಸ್ ನಾಯಕ, ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಮಧ್ಯಾಹ್ನ ಪ್ರವಾಹ ಪೀಡಿತ ಚೊರಾಲ್ ಮಾಲಾ ಪ್ರದೇಶಕ್ಕೆ ಭೇಟಿ ನೀಡಿದರು. ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಳಿಕ ರಸ್ತೆ ಮಾರ್ಗವಾಗಿ ವೈಯನಾಡು ತಲುಪಿದ್ದಾರೆ.
ಧಾರಾಕಾರ ಮಳೆಯ ನಡುವೆ ಪ್ರವಾಹ ಪೀಡಿತ ಪ್ರದೇಶಕ್ಕೆ ಆಗಮಿಸಿದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ, ಮೆಪ್ಪಡಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಅಲ್ಲಿಂದ ಮೆಪ್ಪಡಿಯಲ್ಲಿನ ಡಾ. ಮೂಫೆನ್ಸ್ ವೈದ್ಯಕೀಯ ಕಾಲೇಜು ಹಾಗೂ ಎರಡು ಪರಿಹಾರ ಶಿಬಿರಗಳಿಗೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಕೂಡಾ ಇದ್ದಾರೆ. ರಾಹುಲ್ ಗಾಂಧಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಿದ್ದರಿಂದ ಅದನ್ನು ಉಳಿಸಿಕೊಂಡು ವಯನಾಡನ್ನು ಬಿಟ್ಟುಕೊಟ್ಟಿದ್ದಾರೆ. ಉಪ ಚುನಾವಣೆಯಲ್ಲಿ ಅಲ್ಲಿಂದ ಪ್ರಿಯಾಂಕಾಗಾಂಧಿ ಸ್ಪರ್ಧಿಸುವ ಸಾಧ್ಯತೆಯಿದೆ.