ಅಮೇಥಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿದಿದ್ದಾರೆ. ಬಿಜೆಪಿ ಸ್ಮೃತಿ ಇರಾನಿಗೆ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಅಮೇಥಿಯಲ್ಲಿ ಇರಾನಿ ಮನೆಯೊಂದನ್ನೂ ಕೂಡಾ ಖರೀದಿ ಮಾಡಿದ್ದಾರೆ. ಆ ಮೂಲಕ, 50 ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ತಾನು ದೀರ್ಘಾವಧಿಯ ಯೋಜನೆ ಹೊಂದಿರುವುದನ್ನು ಸ್ಮೃತಿ ಇರಾನಿ ಸಾಬೀತುಪಡಿಸಿದ್ದಾರೆ.
ಕಳೆದ ತಿಂಗಳಷ್ಟೇ ಸ್ಮೃತಿ ಇರಾನಿಯ ಮನೆಯ ಗೃಹ ಪ್ರವೇಶ ನಡೆದಿದೆ. ಈ ನಡುವೆ ೨೦೧೯ರವರೆಗೆ ತಮ್ಮ ಪಕ್ಷದ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಪಡೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದ್ದಾರೆ. ಈ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಸಂಸದರಾಗಿದ್ದರು. ರಾಹುಲ್ ಗಾಂಧಿ ಕೂಡ ಎರಡು ಬಾರಿ ಇದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸುವುದು ಪಕ್ಕಾ ಆದಲ್ಲಿ ಈ ಕ್ಷೇತ್ರದಲ್ಲಿ ಪ್ರಬಲ ನಾಯಕರ ನಡುವೆ ಮತ್ತೊಮ್ಮೆ ಮುಖಾಮುಖಿ ನಡೆಯಲಿದೆ. ೨೦೦೯ ಮತ್ತು ೨೦೧೪ರಲ್ಲಿ ಅಮೇಥಿಯಿಂದ ಸ್ಪರ್ಧಿಸಿ ರಾಹುಲ್ ಗಾಂಧಿ ಜಯ ಸಾಧಿಸಿದ್ದರು. ೨೦೧೪ರಲ್ಲಿ ರಾಹುಲ್ ಎದುರು ಸ್ಮೃತಿ ಇರಾನಿ ಸೋಲು ಕಂಡಿದ್ದರು.
ಆದರೆ ಐದು ವರ್ಷದ ಅವಧಿಯಲ್ಲಿ ಎಲ್ಲ ಹಬ್ಬದ ಸಂದರ್ಭದಲ್ಲಿಯೂ ಜನರಿಗೆ ಉಡುಗೊರೆಗಳನ್ನು ನೀಡುತ್ತಾ ಜನರನ್ನು ಓಲೈಸುವಲ್ಲಿ ಸಫಲರಾದ ಸ್ಮೃತಿ ಇರಾನಿ, ೨೦೧೯ರಲ್ಲಿ ಅಮೇಥಿಯಲ್ಲಿ ಜಯದ ಗದ್ದುಗೆ ಪಡೆದಿದ್ದರು. ಈಗ, ಮತ್ತೆ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದು, ಧೈರ್ಯವಿದ್ದರೆ ವಯನಾಡು ಬಿಟ್ಟು ಅಮೇಥಿಯಲ್ಲಿ ಸ್ಪರ್ಧಿಸಿ ಎಂದಿದ್ದಾರೆ. ಈಗ ರಾಹುಲ್ ಗಾಂಧಿ ಸವಾಲು ಸ್ವೀಕರಿಸಿ ಅಮೇಥಿಯಿಂದಲೇ ಸ್ಪರ್ಧಿಸುತ್ತಾರಾ ಕಾದುನೋಡಬೇಕಾಗಿದೆ.