Wednesday, February 4, 2026
Google search engine

Homeರಾಜಕೀಯರಾಹುಲ್ ಗಾಂಧಿ ಧ್ವನಿ ಹತ್ತಿಕ್ಕುವ ಯತ್ನ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ರಾಹುಲ್ ಗಾಂಧಿ ಧ್ವನಿ ಹತ್ತಿಕ್ಕುವ ಯತ್ನ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು : ಸಂಸತ್ತಿನಲ್ಲಿ‌ ವಿರೋಧ ಪಕ್ಷದ ನಾಯಕನ ಧ್ವನಿ ಅಡಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿರುವ ಆಡಳಿತ ಪಕ್ಷದ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮಾಡಿ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆಯವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಎಂಬ ಪುಸ್ತಕದಲ್ಲಿನ ವಿಷಯಗಳನ್ನು ಉಲ್ಲೇಖಿಸಿ  ರಾಷ್ಟ್ರೀಯ ಭದ್ರತೆಯ ಕುರಿತು ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದರು. ಈ ಪುಸ್ತಕವು 2024ರಲ್ಲೇ ಬಿಡುಗಡೆಯಾಗಬೇಕಿತ್ತು, ಆದರೆ ಕೇಂದ್ರ ಸರ್ಕಾರ ಇದರ ಬಿಡುಗಡೆಗೆ ತಡೆಯೊಡ್ಡಿರುವ ಕಾರಣಕ್ಕೆ ಇನ್ನೂ ಪ್ರಕಟವಾಗಿಲ್ಲ. ಇತ್ತೀಚಿನ ಕಾರವಾನ್ ಮ್ಯಾಗಜೀನ್‌ನ ಲೇಖನದಲ್ಲಿ ಈ ಪುಸ್ತಕದ ಕೆಲವು ಬರಹಗಳನ್ನು ಉಲ್ಲೇಖಿಸಲಾಗಿದೆ. ಜನರಲ್ ನರವಣೆಯವರು ಕಾರವಾನ್‌‌ ನ ಲೇಖನದಲ್ಲಿ ಪ್ರಕಟಗೊಂಡಿರುವ ವಿಚಾರಗಳು ತಮ್ಮದಲ್ಲ ಎಂದು ಅಲ್ಲಗಳೆದಿಲ್ಲ. ಬದಲಿಗೆ, ತಮ್ಮ ಪುಸ್ತಕ ಬಿಡುಗೆಯಾಗಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ.

ನರವಣೆಯವರ ಬರಹಗಳಲ್ಲಿ ತಪ್ಪುಗಳಿದ್ದರೆ ಅಥವಾ ಅಸತ್ಯದಿಂದ ಕೂಡಿದ್ದರೆ ಕೇಂದ್ರ ಸರ್ಕಾರವು ಪುಸ್ತಕದ ಪ್ರಕಟಣೆಗೆ ಅನುಮತಿ ನೀಡಬಾರದಿತ್ತು. ಆದರೆ ಕೇಂದ್ರ ಸರ್ಕಾರದ ಮೌನವು ನರವಣೆ ಅವರು ಹೇಳಲು ಹೊರಟಿರುವ ಸತ್ಯವನ್ನು ಅಡಗಿಸುವ ದುಷ್ಟ ಆಲೋಚನೆಯಿಂದ ಕೂಡಿದೆ ಎಂಬುದನ್ನು ತೋರುತ್ತದೆ ಎಂದು ಕೇಂದ್ರದ ನಡೆಯನ್ನು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

2020ರಲ್ಲಿ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ದಿಟ್ಟ ಹಾಗೂ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲವಾಯಿತು ಎನ್ನುವ ಮಾಹಿತಿ ಈ ಪುಸ್ತಕದಲ್ಲಿದೆ. ಸರ್ಕಾರದ ಈ ದ್ವಂದ್ವ ನಿಲುವಿನಿಂದ ಸೇನಾಪಡೆಗಳು ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಸಂದಿಗ್ಧತೆಯನ್ನು ಕೂಡ ನಿಭಾಯಿಸಬೇಕಾಯಿತು. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿನ ರಾಜಕೀಯ ನಾಯಕತ್ವದ ವೈಫಲ್ಯ ಮತ್ತು ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರಗಳಲ್ಲಿ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಇರುವ ಅಸಾಮರ್ಥ್ಯವನ್ನು ತೋರಿಸುತ್ತದೆ.  ಇಂತಹ ವಿಷಯಗಳು ಸಂಸತ್ತಿನಲ್ಲಿ ಚರ್ಚೆಗೆ ಒಳಪಡಬೇಕು ಎಂಬುದರಲ್ಲಿ‌ ಅನುಮಾನವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜನರ ಪರವಾಗಿ ಪ್ರಶ್ನೆಗಳನ್ನು ಕೇಳುವುದು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯವರ ಕರ್ತವ್ಯವಾಗಿದೆ. ಅದನ್ನು ಅವರು ಮಾಡಿದ್ದಾರೆ. ರಾಹುಲ್ ಗಾಂಧಿಯವರು ಭಾರತದ ಅಥವಾ ನಮ್ಮ ಸೇನಾಪಡೆಗಳ ವಿರುದ್ಧ ಮಾತನಾಡಿಲ್ಲ. ಹೀಗಿದ್ದರೂ ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು, ಸತತ ಎರಡು ದಿನಗಳ ಕಾಲ ಸಂಸತ್ತನ್ನು ಸ್ಥಗಿತಗೊಳಿಸಿ, ಎಂಟು ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿ ಮತ್ತು ರಾಷ್ಟ್ರಪತಿಯ ಭಾಷಣದ ಮೇಲೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವನ್ನೇ ನಿರಾಕರಿಸಿರುವುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದ ಕ್ರಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ರಾಜಕೀಯ ಪರಿಣಾಮಗಳನ್ನು ಎದುರಿಸುವ ಬದ್ಧತೆಯನ್ನು ತೋರ್ಪಡಿಸುವಂತಿರಬೇಕು. ಆದರೆ ಮೋದಿ ಸರ್ಕಾರವು ಒತ್ತಡ ತಂತ್ರದ ಮೂಲಕ ಎದುರಾಳಿಗಳ ಧ್ವನಿಯನ್ನೇ ಹತ್ತಿಕ್ಕಲು ಹೊರಟಿದೆ. ಇಲ್ಲಿ‌ ಜನರಿಂದ ಮುಚ್ಚಿಡುವಂತಹ ವಿಷಯಗಳು ಇಲ್ಲದಿದ್ದರೆ ಚರ್ಚೆಯನ್ನು ನಿರಾಕರಿಸುತ್ತಿರುವುದು ಯಾಕೆ? ರಾಷ್ಟ್ರೀಯ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗಿದ್ದರೆ, ಸಂಸತ್ತಿನ ಪರಾಮರ್ಶೆಗೆ ಒಳಪಡಲು ಯಾಕೆ ಭಯ? ಎಂದು ಪ್ರಶ್ನಿಸಿದ್ದಾರೆ

ಬಿಜೆಪಿಯ ದೇಶ ಮೊದಲು, ಧರ್ಮ ಮೊದಲು ಇವೆಲ್ಲ ಬೊಗಳೆ ಭಾಷಣದ ಸರಕುಗಳಷ್ಟೆ. ಮೌನ, ಪಲಾಯನ ಮತ್ತು ಶರಣಾಗತಿಗಳನ್ನು ಸಂಘಪರಿವಾರ ಬಿಜೆಪಿ ನಾಯಕರಿಗೆ ಧಾರೆಯೆರೆದು ಕಳಿಸಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ

RELATED ARTICLES
- Advertisment -
Google search engine

Most Popular