ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕಡೋಣಿ ತಿಮ್ಮಾಪುರ ಗ್ರಾಮದಲ್ಲಿ ವಿಷಹಾರ ಮಿಶ್ರಿತ ಆಹಾರ ತಿಂದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು,ಮೂವರ ಸ್ಥಿತಿ ಗಂಭೀರವಾಗಿದೆ.
ರಮೇಶ ನಾಯಕ (38), ಇವರ ಪುತ್ರಿಯರಾದ ನಾಗಮ್ಮ (8), ದೀಪಾ (6) ಮೃತಪಟ್ಟವರು. ಹೊಲದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ ಚವಳೆಕಾಯಿ ಪಲ್ಯ ತಯಾರಿಸಿ ಕುಟುಂಬ ಸದಸ್ಯರು ರಾತ್ರಿ ಊಟ ಮಾಡಿದ್ದರು. ರಮೇಶ ನಾಯಕ ಪತ್ನಿ ಪದ್ಮಾ (35), ಪುತ್ರ ಕೃಷ್ಣ (12), ಪುತ್ರಿ ಚೈತ್ರಾ (10) ತೀವ್ರ ಅಸ್ವಸ್ಥರಾಗಿದ್ದು ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್‌ಗೆ ದಾಖಲಿಸಲಾಗಿದೆ.
ಎರಡು ಎಕರೆ ಸ್ವಂತ ಜಮೀನಿನಲ್ಲಿ ಹತ್ತಿ ಬೆಳೆದಿದ್ದ ರಮೇಶ ನಾಯಕ ಅವರು ಬದುವಿನಲ್ಲಿ ಮನೆ ಬಳಕೆಗಾಗಿ ತರಕಾರಿ ಬೆಳೆಸಿದ್ದಾರೆ. ಶನಿವಾರ ಕೀಟ ನಿಯಂತ್ರಣಕ್ಕಾಗಿ ಚವಳೆಕಾಯಿಗೆ ಕ್ರಿಮಿನಾಶಕ ಸಿಂಪಡಿಸಿ ತಳದಲ್ಲಿ ಗುಳಿಗೆಗಳನ್ನು ಇಟ್ಟಿದ್ದರು. ಸೋಮವಾರ ಹೊಲದಲ್ಲಿನ ಚವಳೆಕಾಯಿ ತಂದು ಪಲ್ಯ ತಯಾರಿಸಿ ರಾತ್ರಿ ಊಟ ಮಾಡಿದ ನಂತರ ವಾಕರಿಕೆ, ವಾಂತಿ, ಬೇಧಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೂವರು ಮೃತಪಟ್ಟಿದ್ದಾರೆ.
ಕವಿತಾಳ ಠಾಣೆ ಪಿಎಸ್‌ಐ ವೆಂಕಟೇಶ ನಾಯಕ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.