ಮೈಸೂರು: ಬಿತ್ತನೆ ಬೀಜ ಮಾರಾಟ ಪರವಾನಗಿ ಪಡೆಯದೇ ಅನಧಿಕೃತವಾಗಿ ೧೪೮೦ ಕೆ.ಜಿ. ಪ್ರಮಾಣದ ವಿವಿಧ ತಳಿಯ ಭತ್ತದ ಬಿತ್ತನೆ ಬೀಜ ಸಂಗ್ರಹಣೆ ಮಾಡಿದ್ದ ಗೋದಾಮಿನ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಬಿತ್ತನೆ ಬೀಜ ವಶಪಡಿಸಿಕೊಂಡಿದ್ದಾರೆ.
ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿಯ ಎಸ್‌ಕೆಪಿ ಅಗ್ರಹಾರ ಹಾಗೂ ವ್ಯಾಸರಾಜಪುರ ಗ್ರಾಮದ ಮಧ್ಯೆ ಇರುವ ಜಮೀನಿನಲ್ಲಿ ಮಲ್ಲಿ ಕಾರ್ಜುನಸ್ವಾಮಿ ಎಂಬುವವರು ಅಕ್ರಮವಾಗಿ ಭತ್ತದ ವಿವಿಧ ತಳಿಯ ಬಿತ್ತನೆ ಬೀಜ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಹಾಯಕ ಕೃಷಿ ನಿರ್ದೇಶಕಿ ಸುಹಾಸಿನಿ.ಕೆ.ಎಸ್, ತಾಂತ್ರಿಕ ಅಧಿಕಾರಿ ರಾಘವೇಂದ್ರ ಬಿ.ಪಿ ಹಾಗೂ ಪ್ರಭಾರ ಕೃಷಿ ಅಧಿಕಾರಿ ಶಿವರಾಜು ತಂಡ ೧೪೮೦ ಕೆ.ಜಿ ಪ್ರಮಾಣದ ಬಿತ್ತನೆ ಬೀಜ ವಶಕ್ಕೆ ಪಡೆದುಕೊಂಡಿದೆ.
ಗೋದಾಮಿನಲ್ಲಿ ದಬಾಂಗ್ ಪ್ಲಸ್ ೮೧೦ ಕೆ.ಜಿ, ತುಳಸಿ ೧೬೦ ಕೆ.ಜಿ, ಆಲ್‌ಬಿನಾ ೩೬೦ ಕೆ.ಜಿ, ಐ.ಆರ್-೬೪ ತಳಿಯ ೧೨೫ ಕೆ.ಜಿ ಹಾಗೂ ಎಂಟಿಯು ೧೦೧೦ ತಳಿಯ ೨೫ ಕೆ.ಜಿ ಸೇರಿದಂತೆ ಒಟ್ಟು ೧೪೮೦ ಕೆ.ಜಿ ಪ್ರಮಾಣದ ೪,೮೪,೭೫೪ ರೂ. ಮೌಲ್ಯದ ಬಿತ್ತನೆ ಬೀಜ ಪತ್ತೆಯಾಗಿದೆ.
ವಶಕ್ಕೆ ಪಡೆದ ಬಿತ್ತನೆ ಬೀಜಗಳ ಗುಣಮಟ್ಟ ಪರೀಕ್ಷಿಸಲು ಎಲ್ಲಾ ಲಾಟುಗಳ ಭತ್ತದ ತಳಿಗಳ ಮಾದರಿಗಳನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಬೀಜ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೈತ ಬಾಂಧವರು ಬಿತ್ತನೆ ಬೀಜಗಳನ್ನು ಖರೀದಿಸುವಾಗ ಕಡ್ಡಾಯವಾಗಿ ಬಿಲ್ಲನ್ನು ಪಡೆದುಕೊಳ್ಳಲು ಸಹಾಯಕ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.
ಘಟನೆ ಸಂಬಂಧ ಬನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.