ಬೆಂಗಳೂರು: ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಆರ್ಥಿಕ ಬರೆ ಎಳೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಟೀಕಿಸಿದ್ದಾರೆ. ಈ ದರ ಹೆಚ್ಚಳವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಅವರು ಪ್ರಧಾನಿಗೆ ಒತ್ತಾಯಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯು ಈಗಾಗಲೇ ಜನರನ್ನು ಸಂಕಷ್ಟಕ್ಕೆ ದೂಡಿದ್ದು, ಜಿಎಸ್ಟಿ ಹೊರೆಗೂ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿಯೇ ರೈಲ್ವೆ ದರ ಏರಿಕೆ ಸಾರ್ವಜನಿಕರ ಮೇಲಿನ ಮತ್ತೊಂದು ಭಾರವಾಗಿದೆ ಎಂದು ಸಿಎಂ ಆರೋಪಿಸಿದ್ದಾರೆ.
ಹಾಲಿನ ದರ ಏರಿಸಿದಾಗ ಬಿಜೆಪಿಯವರು ಜನವಿರೋಧಿ ಎಂದು ಆರೋಪಿಸಿದರೂ, ಈಗ ಅವರದೇ ಸರ್ಕಾರ ರೈಲು ದರ ಹೆಚ್ಚಿಸಿದಾಗ ಮೌನವಾಗಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಬೆಂಗಳೂರು ಮೆಟ್ರೊ ದರ ಏರಿಕೆ ವೇಳೆ ಕೇಂದ್ರದ ಪ್ರತಿನಿಧಿಗಳ ನಿರ್ಧಾರವಿದ್ದರೂ ಬಿಜೆಪಿಯವರು ರಾಜ್ಯ ಸರ್ಕಾರವನ್ನು ಟಾರ್ಗೆಟ್ ಮಾಡುವ ಪ್ರಯತ್ನ ಮಾಡಿರುವುದಾಗಿ ಅವರು ವಾದಿಸಿದ್ದಾರೆ.
ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ಬಜೆಟ್ ಮಂಡನೆಯ ಪದ್ಧತಿಯನ್ನು ನರೇಂದ್ರ ಮೋದಿ ಸರ್ಕಾರ ಕೈಬಿಟ್ಟಿರುವ ಕಾರಣ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೊದಲು ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಶ್ವೇತಪತ್ರವನ್ನು ದೇಶದ ಜನತೆಯ ಮುಂದಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.