ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಸಾಲೇಕೊಪ್ಪಲು ಬಳಿ ಕಟ್ಟೆಪುರ ನಾಲೆಯ 61-62 ಕಿಲೋಮೀಟರ್ ನಡುವೆ ಮಳೆಯಿಂದ ಏರಿ ಹಾನಿಯಾಗಿರುವ ಸ್ಥಳವನ್ನು ಕೆ.ಆರ್.ನಗರ ಹಾರಂಗಿ ನಂ- ನೀರಾವರಿ ಇಲಾಖೆಯ ಎಇಇ ಆಯಾಜ್ ಪಾಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಅಗಮಿಸಿದ ಎಇಇ ಅವರಿಗೆ ನಾಲೆ ಏರಿ ಹಾನಿಯಾಗಿ ಅಲ್ಲದೇ ನಾಲೆಯ ಹೆಚ್ಚುವರಿ ನೀರು ಹರಿದು ಹೋಗುವ ಬಿಡುಗಂಡಿಯು ಹಾನಿ ಆಗಿರುವ ಬಗ್ಗೆ ರೈತರು ಮಾಹಿತಿ ನೀಡಿ ತಮ್ಮ ಜಮೀನುಗಳಿಗೆ ಹೋಗಲು ಆಗುತ್ತಿರುವ ತೊಂದರೆಯ ಕುರಿತು ಮನವರಿಕೆ ಮಾಡಿ ಇದನ್ನು ಹೊಸದಾಗಿ ಅಭಿವೃದ್ದಿ ಪಡಿಸುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಎಇಇ ಆಯಾಜ್ ಪಾಷ ಇದನ್ನು ಶಾಸಕ ಡಿ.ರವಿಶಂಕರ್ ಮತ್ತು ಇಲಾಖೆಯ ಇಇ ಕುಶ ಕುಮಾರ್ ಅವರ ಗಮನಕ್ಕೆ ತಂದು ಏರಿ ಮತ್ತು ಬಿಡುಗಂಡಿಯ ಅಭಿವೃದ್ದಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ರಂಗಸ್ವಾಮಿ, ನಟೇಶ್, ಶ್ರೀನಿವಾಸ್ ಸೇರಿದಂತೆ ಸಾಲೇಕೊಪ್ಪಲು ಗ್ರಾಮದ ರೈತರು ಹಾಜರಿದ್ದರು.